ವಿಶಾಖಪಟ್ಟಣ : 'ಜಮ್ಮು-ಕಾಶ್ಮೀರ' ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿರುವ ಗುಂಡಿನ ದಾಳಿಯನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನಕ್ಕೆ ಭಾರತ ಸೇನೆ ತಕ್ಕ ಪಾಠ ಕಲಿಸಲಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ಐ.ಎನ್.ಎಸ್ ಕಮೋತ್ರ ಲೋಕಾರ್ಪಣೆಗೊಳಿಸಿದ ಬಳಿಕ ಪಾಕಿಸ್ತಾನ ನಡೆಸಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ, ಪಾಕಿಸ್ತಾನದ ದಾಳಿಗೆ ಸೂಕ್ತ ಉತ್ತರ ನೀಡಲು ಭಾರತ ಸೇನೆ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಪಾಕ್ ದಾಳಿಯನ್ನು ಸಹಿಸುವುದಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ. ಭಾರತ ಸೇನೆ, ದೇಶದ ಗಡಿ ಪ್ರದೇಶ ಹಾಗೂ ನಾಗರಿಕರನ್ನು ಕಾಪಾಡುತ್ತಿರುವ ಬಗ್ಗೆ ದೇಶದ ಜನತೆಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಯುದ್ಧದ ಸಂದರ್ಭದಲ್ಲಿ ನಾಗರಿಕರ ಮೇಲೆ ದಾಳಿ ನಡೆಸಿದರೂ ಅದು ಅಪರಾಧ, ಆದರೆ ಪಾಕಿಸ್ತಾನ ಸೇನೆ ಶಾಂತಿಯ ಸಂದರ್ಭದಲ್ಲಿ ನಾಗರಿಕರ ಮೇಲೆ ದಾಳಿ ನಡೆಸಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸಿರುವ ಕದನ ವಿರಾಮ ಉಲ್ಲಂಘನೆ ಬಗ್ಗೆ ಸೇನೆ ಹಾಗೂ ರಕ್ಷಣಾ ಸಚಿವಾಲಯ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದು ಶೀಘ್ರವೇ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗುವುದೆಂದು ಜೇಟ್ಲಿ ಭರವಸೆ ನೀಡಿದ್ದಾರೆ.
ಆ.23ರಂದು ಜಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬಿಎಸ್ ಎಫ್ ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.