ನವದೆಹಲಿ : 'ಅಮೆರಿಕ ಪ್ರವಾಸ' ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಭೇಟಿ ಮಾಡುವ ಸಾಧ್ಯತೆಗಳು ಕ್ಷೀಣಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸೀತ್, ಅಮೆರಿಕಾದಲ್ಲಿ ನವಾಜ್ ಷರೀಫ್-ನರೇಂದ್ರ ಮೋದಿ ಭೇಟಿಗೆ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಮೋದಿ-ನವಾಜ್ ಷರೀಫ್ ಭೇಟಿ ಕುರಿತಂತೆ ಈ ವರೆಗೂ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಬಸೀತ್ ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಯು.ಎಸ್ ನ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸುವವರಿದ್ದರು. ಆದರೆ ಭಾರತ ಸರ್ಕಾರ ಪಾಕ್ ನೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಟ್ಟದಲ್ಲಿ ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಮೋದಿ-ನವಾಜ್ ಷರೀಫ್ ದ್ವಿಪಕ್ಷೀಯ ಮಾತುಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿದೆ.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ರಾಯಭಾರಿ ಪ್ರತ್ಯೇಕವಾದಿಗಳೊಂದಿಗೆ ಚರ್ಚೆ ನಡೆಸಿರುವುದು ಹಾಗೂ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದನ್ನು ವಿರೋಧಿಸಿ ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಅಮೆರಿಕಾದಲ್ಲಿ ಮೋದಿ-ನವಾಜ್ ಷರೀಫ್ ಭೇಟಿಗಾಗಿ ಕಾರ್ಯಕ್ರಮ ನಿಗದಿಪಡಿಸಲಾಗಿಲ್ಲ ಎಂದು ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ ಹೇಳಿಕೆ ನೀಡಿದ್ದಾರೆ.
ಒಟ್ಟಾರೆ ಸೆಪ್ಟೆಂಬರ್ ನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಮೋದಿ, ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಭಾರತ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದೂ ಕುತೂಹಲ ಕೆರಳಿಸಿದೆ.