ನವದೆಹಲಿ : 'ಯೋಜನಾ ಆಯೋಗ'ದ ಬದಲಿಗೆ ಅಸ್ಥಿತ್ವಕ್ಕೆ ಬರಲಿರುವ ನೂತನ ಸಂಸ್ಥೆ ಕುರಿತಂತೆ ಹೊಸ ಐಡಿಯಾಗಳನ್ನು, ಸಲಹೆಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದಾರೆ.
ಸರ್ಕಾರದೊಂದಿಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯಮಾಡಿಕೊಳ್ಳಲೆಂದೇ ಆರಂಭಿಸಲಾಗಿರುವ mygov.nic.in ವೆಬ್ ಸೈಟ್ ನಲ್ಲಿ ಯೋಜನಾ ಆಯೋಗದ ಬದಲಿಗೆ ರಚನೆಯಾಗಲಿರುವ ನೂತನ ಸಂಸ್ಥೆಯ ಸ್ವರೂಪ, ಕಾರ್ಯನಿರ್ವಹಣೆಯ ಶೈಲಿ ಬಗ್ಗೆ ಸಾರ್ವಜನಿಕರು ಮುಕ್ತಸಲಹೆಗಳನ್ನು ಒದಗಿಸಬಹುದಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಯೋಜನಾ ಆಯೋಗವನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಮೂಲಕ ಇನ್ನೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದ್ದಾರೆ.
'ಪ್ರಸ್ತಾವಿತ ಸಂಸ್ಥೆ, 21ನೇ ಶತಮಾನದ ಭಾರತದ ಆಶೋತ್ತರಗಳನ್ನು ಈಡೇರಿಸಬಲ್ಲದ್ದಾಗಿರಬೇಕು. ರಾಜ್ಯಗಳ ಪಾಲುದಾರಿಕೆಯನ್ನು ಬಲಪಡಿಸುವಂತಿರಬೇಕು. ಈ ನಿಟ್ಟಿನಲ್ಲಿ ಹೊಸ ಯೋಚನೆಗಳು ಎಲ್ಲ ದಿಕ್ಕುಗಳಿಂದ ಹರಿದು ಬರಲಿ'' ಎಂದು ಪ್ರಧಾನಿ ಮೋದಿ ಟ್ವಿಟರ್ ಮೂಲಕ ದೇಶದ ಜನತೆಗೆ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತ, 64 ವರ್ಷಗಳಷ್ಟು ಹಳೆಯದಾದ ಯೋಜನಾ ಆಯೋಗವನ್ನು ರದ್ದುಪಡಿಸುವುದಾಗಿ ತಿಳಿಸಿದ್ದರು. ಸಮಾಜವಾದಿ ಯುಗದ ಪಳೆಯುಳಿಕೆಯಾಗಿರುವ ಯೋಜನಾ ಆಯೋಗವನ್ನು ರದ್ದುಪಡಿಸಿ, ದೇಶದ ಇಂದಿನ ಅವಶ್ಯಕತೆಗಳನ್ನು ಪೂರೈಸಬಲ್ಲ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬಲ್ಲ ಹೊಸ ಸಂಸ್ಥೆಯನ್ನು ರಚಿಸಲಿದ್ದೇವೆ ಎಂದು ಪ್ರಕಟಿಸಿದ್ದರು. ಯೋಜನಾ ಆಯೋಗದ ಜಾಗದಲ್ಲಿ ಹೊಸ ಸಂಸ್ಥೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ಮೋದಿ ಹೇಳಿದ್ದರು. ಇದೀಗ ಹೊಸ ಸಂಸ್ಥೆಗೆ ಜನರಿಂದಲೇ ಅಭಿಪ್ರಾಯ ಸಂಗ್ರಹಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಮೋದಿ ನಿಜವಾದ ಅರ್ಥ ಕಲ್ಪಿಸಿದ್ದಾರೆ.