ನವದೆಹಲಿ : ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಶಬೀರ್ ಶಾ ಜೊತೆ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಷೀತ್ ಮಾತುಕತೆ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನದೊಂದಿಗೆ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಗೆ ಭಾರತ ಸರ್ಕಾರ ಬ್ರೇಕ್ ಹಾಕಿದೆ.
ಪಾಕಿಸ್ತಾನದ ರಾಯಭಾರಿಯೊಂದಿಗೆ ಆ.25ರಂದು ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಲಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ಪಷ್ಟಪಡಿಸಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ, ಸೈಯದ್ ಅಕ್ಬರುದ್ದೀನ್, ಭಾರತದ ಆಂತರಿಕ ವಿಷಯದಲ್ಲಿ ಪಾಕಿಸ್ತಾನ ತಲೆಹಾಕುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕಾಶ್ಮೀರ ಭಾರತದ ಅಬಿಭಾಜ್ಯ ಅಂಗವಾಗಿದೆ. ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಕಾಶ್ಮೀರ ಪ್ರತ್ಯೇಕವಾದಿಯೊಂದಿಗೆ ಮಾತುಕತೆ ನಡೆಸಿರುವ ಕುತಂತ್ರ ಫಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ಭಾರತದೊಂದಿಗೆ ಸ್ನೇಹ ಬೆಳೆಸಲು ಸಿದ್ಧವಿದೆ. ಆದರೆ ಸರ್ಕಾರವನ್ನು ನೀಯಂತ್ರಿಸುತ್ತಿರುವ ಸೇನೆ, ಐ.ಎಸ್.ಐ ಹಾಗು ಉಗ್ರ ಸಂಘಟನೆಗಳು ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ನವಾಜ್ ಷರೀಫ್ ಸರ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸುವ ಮೂಲಕ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಜಮ್ಮು-ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಠಿಸುತ್ತಿರುವ ಪಾಕಿಸ್ತಾನಕ್ಕೆ ನರೇಂದ್ರ ಮೋದಿ ಸರ್ಕಾರ ಕಠಿಣ ಸಂದೇಶ ರವಾನೆ ಮಾಡಿದೆ.