ಇಸ್ಲಾಮಾಬಾದ್ : 'ಪಾಕಿಸ್ತಾನ' ಪ್ರಧಾನಿ ನವಾಜ್ ಷರೀಫ್ ಗೆ ಸಂಕಷ್ಟ ಎದುರಾಗಿದೆ. ನವಾಜ್ ಷರೀಫ್ ವಿರುದ್ಧ ಕೊಲೆ ಕೇಸ್ ದಾಖಲಿಸಲು ಪಾಕಿಸ್ತಾನದ ಲಾಹೋರ್ ಸೇಷನ್ಸ್ ಕೋರ್ಟ್ ಆದೇಶ ನೀಡಿದೆ.
ಪಾಕ್ ಪ್ರಧಾನಿಯೊಂದಿಗೆ ಅವರ ಸಹೋದರ ಶಹಬಾಜ್ ಷರೀಫ್ ಅವರ ವಿರುದ್ಧವೂ ಕೊಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಕೆನಡಾ ಮೂಲದ ಮೌಲ್ವಿ, ತಾಹಿರ್ ಉಲ್ ಖಾದ್ರಿಯ ಮುಖ್ಯ ಕಚೇರಿಯ ಸಮೀಪ ಜೂನ್ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ.
ಹಿಂಸಾಚಾರದಲ್ಲಿ 14 ನಾಗರಿಕರು ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಜನರಿಗೆ ಗಾಯಗಳುಂಟಾಗಿತ್ತು. ಪಾಕಿಸ್ತಾನ ಅವಾಮಿ ತಹರೀಕ್ ಪಕ್ಷದ ಮುಖ್ಯಸ್ಥರ ಕಚೇರಿಯ ಮುಂದಿನ ಬ್ಯಾರಿಕೇಡ್ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದಾಗ ಜೂ.17ರಂದು ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಪಿಎಟಿಯ 14 ಮಂದಿ ಬೆಂಬಲಿಗರು ಸಾವನ್ನಪ್ಪಿದ್ದರು.
ಷರೀಫ್ ಸೋದರ ಶಹಬಾಜ್ ಸೇರಿ 19 ಜನರ ವಿರುದ್ಧ ಪ್ರಕರಣ ದಾಖಲೆಗೆ ಸೂಚನೆ ನೀಡಲಾಗಿರುವುದನ್ನು ಪಿಎಟಿ ಪಕ್ಷ ಸ್ವಾಗತಿಸಿದ್ದು, ನವಾಜ್ ಷರೀಫ್ ಅಧಿಕಾರದಿಂದ ಕೆಳಗಿಳಿಯಬೆಕೆಂದು ಪಿಎಟಿ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.