ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಉಗ್ರರು ನಡೆಸಿರುವ ದಾಳಿಗೆ 7 ಗಡಿ ಭದ್ರತಾ ಪಡೆ(ಬಿ.ಎಸ್.ಎಫ್) ಯೋಧರು ಗಾಯಗೊಂಡಿದ್ದಾರೆ.
ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೆಂಗಾವಲು ಬಿ.ಎಸ್.ಎಫ್ ಪಡೆ ಮೇಲೆ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಘಟನೆಯಲ್ಲಿ 7 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿಯನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಲಡಾಕ್ ನಲ್ಲಿ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಗದಲ್ಲಿ ಸಾಗಬೇಕಿತ್ತು.
ಪಾಕಿಸ್ತಾನ ಯೋಧರ ದಾಳಿಗೆ ಪ್ರತಿದಿನ ಭಾರತದ ಸೈನಿಕರು ಗಾಯಗೊಳ್ಳುತ್ತಿದ್ದಾರೆ. ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕ್ ಯೋಧರು ಆ.11ರಂದೂ ಆರ್.ಎಸ್.ಪುರ ಸೆಕ್ಟರ್ ನಲ್ಲಿ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಇಬ್ಬರು ಬಿ.ಎಸ್.ಎಫ್ ಯೋಧರು ಗಾಯಗೊಂಡಿದ್ದರು.