Untitled Document
Sign Up | Login    
ಜಗತ್ತು ಸ್ವೀಕರಿಸುವುದು ಉನ್ನತ ಚಿಂತನೆಗಳನ್ನೇ ಹೊರತು, ಮೂರನೇ ದರ್ಜೆಯ ಚಿಂತನೆಗಳನ್ನಲ್ಲ!

ರಾಮಾಯಣ

The problem with the world is The intelligent people are full of doubt, while the stupid people are full of confidence ಎಂಬ ಮಾತಿದೆ. ಹಾಗೆಂದ ಮಾತ್ರಕ್ಕೆ ಆತ್ಮವಿಶ್ವಾಸದಿಂದ ಮಾತನಾಡುವವರೆಲ್ಲಾ ಮೂರ್ಖರಾಗಿರುವುದಿಲ್ಲ. ಹಾಗೆಯೇ ಬುದ್ದಿಜೀವಿಗಳೆಂದು ಸ್ವಯಂ ಘೋಷಣೆ ಮಾಡಿಕೊಂಡುಬಿಟ್ಟರೆ ಅವರಿಗೆ ಬುದ್ಧಿ ಇರುವುದಿಲ್ಲ. ’ಬುದ್ಧಿಜೀವಿ’ಗಳು ತಾವು ಏನನ್ನೇ ಹೇಳಬೇಕಿದ್ದರೂ ಎಷ್ಟೇ ವಿರೋಧ ವ್ಯಕ್ತವಾದರೂ, ಎಷ್ಟೇ ಬಾಲಿಶವಾಗಿದ್ದರೂ, ಯಾವುದೇ ಆತಂಕವಿಲ್ಲದೇ ಅದನ್ನು ಬಹಳ confident ಆಗಿಯೇ ಪ್ರಸ್ತುತಪಡಿಸುತ್ತಾರೆ. ಈ ಪ್ರವೃತ್ತಿ ಮಿತಿ ಮೀತಿಮೀರುತ್ತಿರುವುದರಿಂದಲೋ ಏನೋ, ಭಗವಾನ್ ಅಂತಹ ಚಿಂತಕರ ಮನಸ್ಥಿತಿ ಚಿಂತಾಜನಕವಾಗುತ್ತಿದೆ.

ಪ್ರೊ.ಭಗವಾನ್ ರಂತಹ ವ್ಯಕ್ತಿಗಳು ಚಿಂತನೆ ಮಾಡುವುದೇ ಅಪರೂಪ, ಚಿಂತನೆ ನಡೆಸುವುದಾರೂ ಶಂಕರರು, ದೇವತೆಗಳ ಆಯುಧ, ಭಗವದ್ಗೀತೆ, ರಾಮ, ಪುರೋಹಿತ ಶಾಹಿ ಇಂತಹ ವಿಷಯಗಳನ್ನು ಮೀರಿ ಅವರ ಚಿಂತನೆಗಳು ಬೆಳೆಯುವುದಿಲ್ಲ. ಬುದ್ಧಿಜೀವಿಗಳಲ್ಲಿ ಇರಬೇಕಾದ ಪ್ರಧಾನ ಲಕ್ಷಣ ಅದು. ಹಾಗೆ ಚಿಂತನೆ ಮಾಡಿದಾಗೆಲ್ಲ, ಇವರ ತಲೆಯೊಳಗೆ ಮದ್ಯ, ಮಾನಿನಿ, ಕೊಲೆ ಹಾಗೂ ಇನ್ನೂ ಅನೇಕ ಸಮಾಜಘಾತುಕ ಅಂಶಗಳೆಲ್ಲಾ ಒಟ್ಟೊಟಿಗೆ ಇಣುಕುತ್ತವೆ. ಯಾವುದೇ ವಸ್ತುವಾಗಿರಲಿ, ಅದಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕವಾಗಿ ಇಂತಹ ಮೂರನೇ ದರ್ಜೆಯ ವಿಚಾರಗಳೇ ಸ್ಫುರಿಸುತ್ತವೆ ವಿನಃ ಯಾರಿಗೂ ಹೊಳೆಯದ ಅದ್ಭುತಗಳೇನೂ ಹೊಳೆಯುವುದಿಲ್ಲ. ಅವರ ಚಿಂತನೆ ಅಷ್ಟು ಉತ್ಕೃಷ್ಟವಾದದ್ದು.

ರಾಮಸೇತು ವಿಷಯ ಬಂದರೆ ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಎಂದು ಪ್ರಶ್ನಿಸುವುದಕ್ಕೋ, ಭಗವದ್ಗೀತೆಯನ್ನು ನೋಡಿದ ಕೂಡಲೇ ಸುಡಬೇಕೆಂದೋ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆದರ್ಶ ಗುಣಗಳಿಗೆ ಅನ್ವರ್ಥನಾಗಿರುವ ರಾಮನಿಗೆ ಮದಿರೆ, ಮಾನಿನಿಯರ ಚಟವನ್ನು ಹತ್ತಿಸಬೇಕೆಂಬ ಉದ್ದೇಶದಿಂದಲೋ ಇಂತಹವರ ಮನಸ್ಸು ಹಪಹಪಿಸುತ್ತಿರುತ್ತದೆ. ಹಿಂದೂಗಳನ್ನು ದ್ವೇಷಿಸಲೆಂದೇ ಹುಟ್ಟಿದ್ದಾರೇನೋ ಎಂಬಂತೆ ವರ್ತಿಸುವ ಇವರು, ಸದ್ಯಕ್ಕೆ ರಾಮನ ಚಾರಿತ್ರ್ಯಹರಣ ಮಾಡಲು ಹೊರಟಿದ್ದಾರೆ. ಈಗ ಮುಂದಿರುವ ಪ್ರಶ್ನೆ ರಾಮನದ್ದಲ್ಲ. ಆದರೆ ಈ ಸ್ವಯಂಘೋಷಿತ ಪಂಡಿತರು ಇನ್ನೂ ಎಷ್ಟು ಕಾಲ ತಮ್ಮ ಮೂರನೇ ದರ್ಜೆಯ ಚಿಂತನೆಗಳನ್ನು ಮಾರ್ಕೆಟಿಂಗ್ ಮಾಡುತ್ತಾರೆ ಎಂಬುದು. ರಾಮನಿಂದ ಹಿಡಿದು ರಾಮರಾಜ್ಯದ ಕನಸು ಕಂಡಿದ್ದ ದಕ್ಷ ಅಧಿಕಾರಿ ಅನುಮಾನಾಸ್ಪದ ಸಾವು ಸಂಭವಿಸಿದರೂ ಅವರ ಚಿಂತನೆಗಳೇಕೆ ಮದಿರೆ, ಮಾನಿನಿಯಂತಹ ವಿಷಯಗಳನ್ನು ಬಿಟ್ಟು ಮೇಲೆ ಏರುವುದಿಲ್ಲ ಎಂಬುದು..

ವಾಲ್ಮೀಕಿ ರಾಮಾಯಣವನ್ನು ಹೊರತುಪಡಿಸಿ ನೋಡುವುದಾದರೂ, ರಾಜರುಗಳ ಕಾಲದ ಕವಿಗಳಿಂದ ರಾಜಕಾರಣಿ ವೀರಪ್ಪ ಮೊಯ್ಲಿವರೆಗೂ ಅದೆಷ್ಟೋ ಜನರು ರಾಮಾಯಣಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಬರೆದಿದ್ದಾರೆ. ವಿಭಿನ್ನ ಕಥಾವಸ್ತು ಹಿಡಿದು ಬರೆದಿದ್ದಾರೆ. ಒಂದೇ ವಸ್ತುವಿನಲ್ಲಿ ಬೇರೆ ಎಳೆಯನ್ನು ತೆಗೆದು ದೇಶೀಯರು, ವಿದೇಶೀಯರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ್ಯಾರಿಗೂ ರಾಮನ ಏಕಪತ್ನಿ ವ್ರತದ ಬಗ್ಗೆ ಅನುಮಾನ ಮೂಡಿರಲಿಲ್ಲ. ರಾಮ ಮದಿರೆಗೆ ಮನಸೋತಿದ್ದನೇ ಎಂಬ ಪ್ರಶ್ನೆ ಕಾಡಿರಲಿಲ್ಲ. ಆದರೆ ಇವರನ್ನು ಕಾಡುತ್ತಿದೆ!. ಭಾರತದ ಪುರಾಣಗಳನ್ನೇ ಆಧರಿಸಿ ಬರೆದ ಪುಸ್ತಕಗಳನ್ನು ಬರೆಯುವವರಿಗೆ ಪ್ರತಿ ಮೈಥಾಲಜಿಕಲ್ ಕಥೆಯಿಂದ ಹೊಸ ಕಥಾವಸ್ತು ದೊರೆಯುತ್ತದೆ. ಭಾರತದ ಭವ್ಯ ಪರಂಪರೆಯನ್ನು ಯಾರೂ ಕಾಣಲು ಸಾಧ್ಯವಾಗಿಲ್ಲದ ದೃಷ್ಟಿಯಲ್ಲಿ ಅದನ್ನು ಕಟ್ಟಿಕೊಡುತ್ತಾರೆ. ಆವರಿಗೆಲ್ಲಾ ಉತ್ಕೃಷ್ಟ ವಿಚಾರಗಳು ಹೊಳೆದರೆ, ಭಗವಾನ್ ಅಂತಹವರಿಗೇಕೆ ನಿಕೃಷ್ಟ ವಿಚಾರಗಳೇ ಹೊಳೆಯುತ್ತವೆ?

ಅದಿರಲಿ, ಮಾತೆತ್ತಿದರೆ ಸಾಮಾಜಿಕ ನ್ಯಾಯ, ಸರ್ವರಿಗೂ ಸಮಾನತೆ ಎಂದು ಕಂಠಶೋಷಣೆ ಮಾಡಿಕೊಳ್ಳುವವರು ಶಿವ ಟ್ರಯಾಲಜಿಯಂತಹ ಪುಸ್ತಕಗಳನ್ನು ಓದಿದ್ದಾರಾ? ಪುರಾಣವನ್ನೇ ಕಥಾವಸ್ತುವಾಗಿಟ್ಟುಕೊಂಡು ಹೊಸತೊಂದನ್ನು ನೀಡುವ ಟ್ರೆಂಡ್ ಕ್ರಿಯೇಟ್ ಆಗುತ್ತಿದ್ದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಪಡೆಯುತ್ತಿವೆ. ಅಧ್ಯಯನಶೀಲತೆ ದೃಷ್ಟಿಯಿಂದಲಂತೂ ಅತ್ಯದ್ಭುತವಾದ ಹೆಸರುಗಳಿಸುತ್ತಿವೆ. ನೀವು ಇಲ್ಲಿ ಮೈಕ್ ಮುಂದೆ ನಿಂತು ಪ್ರತಿ ಬಾರಿಯೂ ಹೇಳುತ್ತೀರಲ್ಲಾ, ವೈಚಾರಿಕತೆ, ವೈಜ್ನಾನಿಕತೆ ಇತ್ಯಾದಿ ಇತ್ಯಾದಿ.. ಆ ಎಲ್ಲಾ ಆಯಾಮಗಳೂ ಅಂತಹ ಪುಸ್ತಕಗಳಲ್ಲಿ ಸಿಗುತ್ತವೆ. ಪುರಾಣ, ಮೈಥಾಲಜಿಯನ್ನಾಧರಿಸಿ ತತ್ವಗಳನ್ನು, ತಾರ್ಕಿಕ, ವೈಜ್ಞಾನಿಕ ವಿವರಣೆಗಳನ್ನಷ್ಟೇ ಅಲ್ಲದೇ ಭೌಗೋಳಿಕ ಪುರಾತತ್ವನ್ನೊಳಗೊಂಡತಹ, ಬುದ್ಧಿಯನ್ನು ಪ್ರಚೋದಿಸುವ ಪುಸ್ತಕಗಳಿಗೆ ಬೇಡಿಕೆ ಇದೆ. ಆದರೆ ರಾಮನನ್ನು ಮದಿರೆ, ಮಾನಿನಿಯರಿಗೆ, ಭಗವದ್ಗೀತೆಯನ್ನು ಪುರೋಹಿತ ಶಾಹಿಗೆ ಕಟ್ಟಿಹಾಕುವ ನಿಮ್ಮ ಮೂರನೇ ದರ್ಜೆಗೂ ಲಾಯಕ್ಕಿಲ್ಲದ ಚಿಂತನೆಗಳಿಗಲ್ಲ. ಪುರಾಣಗಳನ್ನು ಮಹಾಕಾವ್ಯಗಳನ್ನು ಆಧರಿಸಿ ಮಾಡುವುದಾದರೆ ಕಳಪೆ ಮಟ್ಟದ ಥಿಯರಿಗಳನ್ನು ಬದಿಗಿಟ್ಟು ಅಂತಹ ಬೇಡಿಕೆಯುಳ್ಳ ಆಯಾಮದಿಂದ ಏನಾದರೂ ಮಾಡಿರಲ್ಲಾ ಕನ್ನಡದ ಮಟ್ಟಿಗೆ ಒಳ್ಳೆಯ ಹೆಸರಾದರೂ ಬಂದೀತು. ಅಂತಹ ಯಾವುದಾದರೂ ಒಂದು ಉನ್ನತವಾದ ಕೆಲಸವನ್ನು ಮದಿರೆ, ಮಾನಿನಿಯರ ಸುತ್ತವೇ ತಿರುಗುವ ಮನಸ್ಥಿತಿ ಹೊಂದಿರುವ ನಿಮ್ಮಿಂದ ನಿರೀಕ್ಷಿಸಬಹುದಾ? ಅದು ಸಾಧ್ಯವಿಲ್ಲ ಎಂದಾದರೆ ತಮಗೆ ಅಂತಹ ವಿಶಿಷ್ಠ ಯೋಚನಾ ಲಹರಿ ಸ್ಫುರಿಸುವುದಿಲ್ಲ ಎಂದು ಸುಮ್ಮನಿರಿ. ಅದನ್ನು ಬಿಟ್ಟು, ಉನ್ನತ ಮಟ್ಟದಲ್ಲಿ ವಿಶಿಷ್ಟ ಯೋಚನಾ ಲಹರಿ ಮೂಡದೇ ಇರುವ ನಿಮ್ಮ ಬೌದ್ಧಿಕ ದಿವಾಳಿತನವನ್ನು ಮುಚ್ಚಿಡಲು ಶ್ರೀರಾಮನ ಮೇಲೆ, ಭಗವದ್ಗೀತೆ ವಿರುದ್ಧವೇಕೆ ಅಪಪ್ರಚಾರ ಮಾಡುತ್ತೀರಿ?

ಪರ್ವ ಕಾದಂಬರಿಯನ್ನು ಹೊರತುಪಡಿಸಿದರೆ, ಕನ್ನಡದ ಮಟ್ಟಿಗಂತೂ ಪುರಾಣಗಳನ್ನಾಧರಿಸಿ ತಾರ್ಕಿಕ ವೈಜ್ಞಾನಿಕ ವಿವರಣೆಯೊಂದಿಗೆ ಹೊರಬಂದಿರುವ ಎರಡನೆಯ ಕಾದಂಬರಿಯನ್ನು ಹೆಸರಿಸುವುದು ಕಷ್ಟ. ಆದರೆ ನೀವು ಅದನ್ನೂ ತಿರಸ್ಕರಿಸುತ್ತೀರಿ, ಉತ್ತಮವಾದದ್ದೆಲ್ಲವೂ ನಿಮಗೆ ವರ್ಜ್ಯ! ಚಾರಿತ್ರ್ಯ ಹರಣ, ವ್ಯಕ್ತಿ ನಿಂದನೆಯಲ್ಲಿ ತೊಡಗಿರುವ ನಿಮಗೆ ಎಂದೋ ತಿಪ್ಪೆಗೆ ಎಸೆಯಲಾಗಿರುವ ಆರ್ಯ-ದ್ರಾವಿಡರೆಂಬ ಥಿಯರಿಯೇ ಪರಮಶ್ರೇಷ್ಟವಾದದ್ದು. ಭಾರತದಂತಹ ಭವ್ಯರಾಷ್ಟ್ರದಲ್ಲಿ ಹುಟ್ಟಿದ್ದರೂ ಇತಿಹಾಸವನ್ನೇ ತಿರುಚಿದ ಮ್ಯಾಕ್ಸ್ ಮುಲ್ಲರ್ ನಿಮಗೆ ಆರಾಧ್ಯ ದೈವ! ಇಡೀ ದೇಶವೇ ರಾಮರಾಜ್ಯದ ಕನಸು ನನಸಾಗಬೇಕೆಂದು ಹಪಹಪಿಸುತ್ತಿದೆ. ಅದಕ್ಕಾಗಿ ದಕ್ಷ ಅಧಿಕಾರಿಗಳು ಹುಟ್ಟಿ ಬರಲಿ ಎಂದು ಆಶಿಸುತ್ತದೆ. ಆದರೆ ಪರಿಸ್ಥಿತಿಯ ವ್ಯಂಗ್ಯ, ರಾಮರಾಜ್ಯದ ಕನಸು ಹೊತ್ತಿದ್ದ ದಕ್ಷ ಐ.ಎ.ಎಸ್ ಅಧಿಕಾರಿ ಇತ್ತೀಚೆಗಷ್ಟೇ ನಿಗೂಢವಾಗಿ ಸಾವನ್ನಪ್ಪಿದರು.

ಇಡಿ ರಾಜ್ಯವೇ ಅವರ ಬಗ್ಗೆ ಹೆಮ್ಮೆ, ಕನಿಕರ ವ್ಯಕ್ತಪಡಿಸುತ್ತಿದ್ದಾಗ ನಿಮ್ಮದೇ ಪಟಾಲಂನವರು ಮೋಹಕ್ಕೆ ಬಲಿಯಾದ 'ದಕ್ಷ' ಎಂಬ ಶೀರ್ಷಿಕೆ ಕೊಟ್ಟು ಆ ಅಧಿಕಾರಿಯ ಚಾರಿತ್ರ್ಯಹರಣ ಮಾಡಿ ಆತ್ಮಹೆತ್ಯೆ ಎಂದು ಷರಾ ಎಳೆದಿದ್ದರು. ಕಣ್ಣಮುಂದೆ ಬದುಕಿದ್ದ ಸಚ್ಚಾರಿತ್ರ್ಯದ ಅಧಿಕಾರಿಯ ಚಾರಿತ್ರ್ಯವನ್ನು ಹರಣ ಮಾಡುವಾಗ ನೀವು ಮದಿರೆ, ಮಾನಿನಿಯರನ್ನು ಮುಂದಿಟ್ಟುಕೊಂಡು ಎಂದೋ ಆಗಿ ಹೋಗಿರುವ ರಾಮನ ಚಾರಿತ್ರ್ಯ ಹರಣ ಮಾಡಿದ್ದರಲ್ಲಿ ಆಶ್ಚರ್ಯವಿಲ್ಲ ಬಿಡಿ. ಆದರೆ ಇವೆಲ್ಲವನ್ನೂ ನೋಡಿದ ಮೇಲೂ ನಿಮ್ಮದು ಮೂರನೇ ದರ್ಜೆಯ ಚಿಂತನೆಗಳಲ್ಲ ಎಂದು ಹೇಳಲು ಸಾಧ್ಯವಾದೀತೆ? ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಯಾರಿಗಾದರೂ ಅನುಮಾನ ಮೂಡದೇ ಇದ್ದೀತೆ?

ಅದಿರಲಿ, ’ವಿಶ್ವಮಾನವತೆ’ ಎಂದು ಹೇಳುವವರು ಹಿಂದುತ್ವ, ಹಿಂದೂ ದೇವತೆಗಳನ್ನು ನಿಂದುಸುತ್ತಲೇ ಕಾಲಹರಣ ಮಾಡುತ್ತಿದ್ದೀರಾಲ್ಲ, ಜಾಗತೀಕ ಮಟ್ಟದಲ್ಲಿ ನಿಮ್ಮ ಸ್ಥಾನ ಏನೆಂದು ಎಂದಾದರೂ ಪ್ರಶ್ನಿಸಿಕೊಂಡಿದ್ದೀರಾ? ಈ ಮಾತನ್ನು ಏಕೆ ಕೇಳಬೇಕೆಂದರೆ, ಬೆಂಕಿ ಹಾಕಬೇಕೆಂದ ಭಾರತದ ಭಗವದ್ಗೀತೆ, ನೀವು ಅವಹೇಳನ ಮಾಡುತ್ತಿರುವ ರಾಮಾಯಣ, ರಾಮ ಈ ಅಷ್ಟೂ ವಿಷಯಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇದೆ. ವಿದೇಶಿಗರು ಜ್ನಾನಾರ್ಜನೆಗಾಗಿ ಭಾರತದ ಮಹಾಕಾವ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಸನಾತನ ಧರ್ಮಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಹೆಸರು ಕೇಳಿದರೇನೆ ನೀವುಗಳು ಮೂರ್ಚೆ ಹೋಗುವ ಯೋಗ ಶಿಕ್ಷಣ, ಉಪನಿಷತ್ತು, ವೇದಗಳನ್ನು ಕಲಿಯಲು ಪಾಶ್ಚಾತ್ಯರೂ ಹಾತೊರೆಯುತ್ತಿದ್ದಾರೆ. ನಿಮಗೆ ಗೊತ್ತಿರಬಹುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನವನ್ನು ಆಚರಿಸಲು ಜಗತ್ತಿನಾದ್ಯಂತ 150ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದೊಂದಿಗೆ ಕೈಜೋಡಿಸಿವೆ. ಪಶ್ಚಿಮದಲ್ಲಿ ಭಾರತದ ತತ್ವಶಾಸ್ತ್ರ, ಸಂಸ್ಕೃತಕ್ಕೆ ಅಪಾರ ಬೇಡಿಕೆ ಇದೆ. ಅವೆಲ್ಲದರ ಬಗ್ಗೆ ಔಚಿತ್ಯವಾಗಿ ಮಾತನಾಡಬೇಕಾದರೂ ಉನ್ನತವಾದ ಚಿಂತನೆ ಅಗತ್ಯ. ಇನ್ನು ಟೀಕಿಸುವುದಾದರೆ ಅದಕ್ಕೆ, ಆಧಾರಗಳ ಜೊತೆಗೆ ಸಮರ್ಥವಾದ ಅಂಶಗಳನ್ನು ಹಿಡಿದು ಮಾತನಾಡಬೇಕಾಗುತ್ತದೆ. ಆದರೆ ಇದ್ಯಾವುದೂ ಇಲ್ಲದೇ ರಾಮ ಮದಿರೆ ಕುಡಿಯುತ್ತಿದ್ದ, ಏಕಪತ್ನಿ ವ್ರತಸ್ಥ ಅಲ್ಲ, ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿರಲಿಲ್ಲ, ಬೆಳಗ್ಗೆಯೆಲ್ಲ ಪುರಾಣ, ಪುಣ್ಯ ಕಥೆಗಳಲ್ಲಿ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಲೇ ಆತ ಸೀತೆ ಮತ್ತಿತರ ಸ್ತ್ರೀಯರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದ ಎಂದು ಹೇಳುವುದು ಕಳಪೆ ಮಟ್ಟದ ಚಿಂತನೆಯಲ್ಲದೇ ಮತ್ತೇನು?

ಬೆಳಗ್ಗೆಯೆಲ್ಲ ಪುರಾಣ, ಪುಣ್ಯ ಕಥೆಗಳಲ್ಲಿ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಲೇ ಮದ್ಯ ಸೇವನೆ ಮಾಡುತ್ತಾನೆ ಎಂದು ಹೇಳಲು, ಬೆಳಿಗ್ಗೆಯಿಂದ ಕಚೇರಿಯಲ್ಲಿದ್ದು ಸಂಜೆಯಾಗುತ್ತಿದ್ದಂತೆಯೇ ಮದ್ಯ ಸೇವಿಸಲು ಶ್ರೀರಾಮನೇನು ಟ್ಯಾಬ್ಲಾಯ್ಡ್ ಜನರ ವರ್ಗಕ್ಕೆ ಸೇರಿದ್ದನೆ? ಕಳಪೆ ಗುಣಮಟ್ಟದ ಚಿಂತನೆಗಳಿಂದ ಹೊರಬರುವ ಹೇಳಿಕೆಗಳನ್ನು ಪುರಸ್ಕರಿಸುವುದಿರಲಿ ಯಾರೂ ಸ್ವೀಕರಿಸುವುದೂ ಇಲ್ಲ ಎಂಬುದು ರಾಮನ ಬಗ್ಗೆ ನೀಡಿದ ಹೇಳಿಕೆಯಿಂದಲೇ ತಿಳಿಯುತ್ತದೆ. ಅಷ್ಟಕ್ಕೂ ಜಾಗತೀಕರಣದ ಯುಗದಲ್ಲಿ ಜಗತ್ತು ಸ್ವೀಕರಿಸುವುದು ಉನ್ನತ ಚಿಂತನೆಗಳನ್ನೇ ಹೊರತು, ಮೂರನೇ ದರ್ಜೆಯ ಚಿಂತನೆಗಳನ್ನಲ್ಲ!

 

Author : ಶ್ರೀನಿವಾಸ್ ರಾವ್

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited