Untitled Document
Sign Up | Login    
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಮಟ್ಟು

ಯಾವುದಾದರೂ ಕಾರ್ಯಕ್ರಮವೊಂದಕ್ಕೆ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಅವರನ್ನು ಪರಿಚಯಿಸಬೇಕಾದರೆ ಇವರಿಗೆ ಇಂತಿಷ್ಟು ರೋಗಗಳಿವೆ, ಇವರು ರೋಗಿಷ್ಠರು, ದಡ್ಡರು, ಆದರೂ ಅವರು ಅಷ್ಟೊಂದು ಸಾಧನೆ ಮಾಡಿದ್ದಾರೆ ಎಂಬ ವ್ಯಕ್ತಿ ಪರಿಚಯಕ್ಕೆ ಪ್ರತಿಕ್ರಿಯೆ ಹೇಗಿರಬಹುದು? ದೇಶದ ಯುವಕರ ಆರಾಧ್ಯ ದೈವ ವಿವೇಕಾನಂದರನ್ನು ರೋಗಿಷ್ಠ, ಪೆದ್ದ ಎಂಬ ಪದಪುಂಜಗಳನ್ನು ಪ್ರಯೋಗಿಸಿದ್ದ ಮಾಜಿ ಪತ್ರಕರ್ತ, ಹಾಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಈ ಪ್ರಶ್ನೆ ಕೇಳಬೇಕಿದೆ.

3 ವರ್ಷಗಳ ಹಿಂದಿನ ಲೇಖನಕ್ಕೆ ಇಂದಿಗೂ ಆಕ್ಷೇಪಗಳ ಪ್ರತಿಕ್ರಿಯೆಗಳು ಬರುತ್ತಿದೆಯೆಂದರೆ, ಲೇಖನದಲ್ಲಿ ಸ್ವಾಮಿ ವಿವೇಕಾನಂದರನ್ನು ಎಷ್ಟರ ಮಟ್ಟಿಗೆ ಕೆಟ್ಟದಾಗಿ ಚಿತ್ರಿಸಿದ್ದರೆಂಬುದನ್ನು ಊಹಿಸಿಕೊಳ್ಳಿ. ಸಾಮಾನ್ಯ ನಾಗರಿಕನಿಗೇ ರೋಗಿಷ್ಠ, ಪೆದ್ದ, ದಡ್ಡ ಎಂದು ಸಂಬೋಧಿಸಿದರೆ ತಡೆಯಲಾರದ ಸಿಟ್ಟು ಬರುತ್ತದೆ. ಅಂಥದ್ದರಲ್ಲಿ ಇಡೀ ದೇಶದ ಯುವಚೈತನ್ಯದ ಮೂರ್ತರೂಪವನ್ನು ಅಂತಹ ಕನಿಷ್ಠ ಪದಗಳಿಂದ ಪರಿಚಯಿಸಿದರೆ ಪ್ರತಿಕ್ರಿಯೆಯೂ ಅಷ್ಟೇ ಕನಿಷ್ಠವಾಗಿರುವುದು ಸಹಜ.

ನಿಮಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ದಿನಗಳು ನೆನಪಿರಬೇಕಲ್ಲವೇ? ಸರ್ಕಾರದ ಸಾಲು ಸಾಲು ಹಗರಣಗಳಿಂದ ರೋಸಿ ಹೋಗಿದ್ದ ಜನರು ಸರ್ಕಾರವನ್ನು ನೇರಾ ನೇರ ಟೀಕಿಸಲು ಮುಂದಾದರು. ಬರಹಗಾರರು, ವಿಶ್ಲೇಷಕರ ಆಕ್ರೋಶಗಳಿಗೆಲ್ಲಾ ವೇದಿಕೆಯಾಗಿದ್ದು ಪ್ರಿಂಟ್ ಅಥವಾ ದೃಶ್ಯ ಮಾಧ್ಯಮಗಳು. ಸಾಮಾನ್ಯ ಜನರಿಗೆ ಸರ್ಕಾರದ ವಿರುದ್ಧ ಇದ್ದ ತಮ್ಮ ಆಕ್ರೋಶವನ್ನು ಹೊರಹಾಕಲು ಇದ್ದದ್ದು ಒಂದೇ ವೇದಿಕೆ ಅದೇ. ಈ ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ಟ್ವಿಟರ್ ಗಳು ಕಾಂಗ್ರೆಸ್ ನ ಹಗರಣಗಳನ್ನು ಬಿಚ್ಚಿಡಲು ಒಂದೆಡೆಯಾದರೆ ಹಗರಣಗಳನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕೂ ವಾದ ಮಂಡಿಸುತ್ತಿದ್ದ ಕಾಂಗ್ರೆಸ್ ನ ಮುಖಂಡರಾದ ದಿಗ್ವಿಜಯ್ ಸಿಂಗ್, ಸಂಜಯ್ ಝಾ ಮುಂದಾದವರ ಆಧಾರ ರಹಿತ ತರ್ಕಗಳಿಂದ ಜನರು ಹೈರಾಣಾಗಿದ್ದರು. ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ, ರಶೀದ್ ಆಲ್ವಿಗಳನ್ನು ಸೋನಿಯಾ ಗಾಂಧಿಯವರ ನಾಯಿಗಳೆಂಬಂತೆ ರೂಪಿಸಿರುವ ಚಿತ್ರಗಳೂ ಕಂಡುಬಂದಿತ್ತು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ವ್ಯಂಗ್ಯ ಚಿತ್ರಗಳಿಗಂತೂ ಲೆಕ್ಕವೇ ಇರಲಿಲ್ಲ.
ತನ್ನ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಸಾಮಾಜಿಕ ಜಾಲತಾಣಗಳು ಟೀಕಿಸಿದ್ದೇ ತಡ, ಇದು ಸ್ವೀಕಾರಾರ್ಹವಲ್ಲ ಎಂದು ಯುಪಿಎ ಸರ್ಕಾರ ಗುಡುಗಿತ್ತು. ಫೇಸ್ ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್ ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಅಂದಿನ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಕಪಿಲ್ ಸಿಬಲ್ ನೀಡಿದ್ದ ಎಚ್ಚರಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಕರ್ನಾಟಕದಲ್ಲೂ ಯುಪಿಎ ಸರ್ಕಾರದ ತದ್ರೂಪು ಕ್ರಮ ನಡೆಯುತ್ತಿದೆ! ಅಂದು ಸಚಿವರು ಲಾರ್ಜ್ ಸ್ಕೇಲ್ ನಲ್ಲಿ ಇಡೀ ಫೇಸ್ ಬುಕ್ ಗೇ ಎಚ್ಚರಿಕೆ ನೀಡಿದ್ದರು, ಇಂದು ಮುಖ್ಯಮಂತ್ರಿ ಸಲಹೆಗಾರರು ಸ್ಮಾಲ್ ಸ್ಕೇಲ್ ನಲ್ಲಿ ಫೇಸ್ ಬುಕ್ ನ ಗುಂಪು ಅಥವಾ ಅದರ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ಯುಪಿಎ ಸರ್ಕಾರ ರಾಷ್ಟ್ರಮಟ್ಟದಲ್ಲಿ ಮಾಡಿದ್ದನ್ನು ಮುಖ್ಯಮಂತ್ರಿ ಸಲಹೆಗಾರರು ರಾಜ್ಯಮಟ್ಟದಲ್ಲಿ ಮಾಡಿದ್ದಾರೆಂಬುದನ್ನು ಬಿಟ್ಟರೆ ಹೆಚ್ಚಿನ ವ್ಯತ್ಯಾಸವಿಲ್ಲ.

ಸಾಮಾನ್ಯ ಜನರು ಅಪ್ ಲೋಡ್ ಮಾಡಿದ ಚಿತ್ರಗಳಿಗೆ ಫೇಸ್ ಬುಕ್ ಮೇಲೆ ಕ್ರಮ ಕೈಗೊಳ್ಳುವುದು ಸಾಧುವೇ ಎಂಬುದು ಅಂದಿನ ಪ್ರಶ್ನೆಯಾಗಿತ್ತು. ಇಂತಹ ಚಿತ್ರಗಳನ್ನು ಫೇಸ್ ಬುಕ್, ಗೂಗಲ್ ಪ್ಲಸ್ ಅಥವಾ ಬ್ಲಾಗ್ ಗಳಲ್ಲಿ ಹಾಕಿದ್ದು ಸರಿಯೋ ತಪ್ಪೋ ಎಂಬ ಚರ್ಚೆಗಿಂತ ಅಂದು ಜನರಲ್ಲಿದ್ದ ಹತಾಶಾ ಭಾವನೆಯೇ ಪ್ರಮುಖ ವಿಷಯವಾಗಿತ್ತು. ಮುಖ್ಯಮಂತ್ರಿ ಸಲಹೆಗಾರರ ಸೋಷಿಯಲ್ ಮೀಡಿಯಾ ನಿಯಂತ್ರಣ ಪ್ರಯತ್ನವನ್ನು ನೋಡಿದರೆ ಇವತ್ತು ಇಂತಹದ್ದೇ ಪ್ರಶ್ನೆ ಉದ್ಭವಿಸುತ್ತಿದೆ.

ಪಾರ್ಲಿಮೆಂಟ್ ನ್ನು ಕಮೋಡ್ ರೀತಿ ಚಿತ್ರಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದವರು, ಇಂದು ವಿವೇಕಾನಂದರ ಲೇಖನದ ಬಗ್ಗೆ ಬಂದ ಪ್ರತಿಕ್ರಿಯೆಯಲ್ಲಿ ವ್ಯಕ್ತವಾದ ಪದಗಳನ್ನು ಒಪ್ಪಲು ಸಾಧ್ಯವಿಲ್ಲ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ಸುಮ್ಮನಿದ್ದುಬಿಡಬಹುದಿತ್ತು ಯಾಕೆ ಹಾಗೆ ಮಾಡಲಿಲ್ಲ?
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಜರಿದದ್ದು ಬೆದರಿಕೆ, ಸಂಚು, ಶಾಂತಿ ಕಡದುವ ಪ್ರಯತ್ನ ಹೇಗಾಗುತ್ತದೆ? ವಿವೇಕಾನಂದರನ್ನು ರೋಗಿಷ್ಠ, ದಡ್ಡ ಎಂದೆಲ್ಲಾ ಜರಿದು ಯುವಜನತೆಯ ಮನಶ್ಶಾಂತಿಯನ್ನು ಕದಡಿದ್ದು ಯಾರು? ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆಂದು ಬೊಬ್ಬೆ ಹೊಡೆದು ತಮ್ಮನ್ನು ಟೀಕಿಸಿದವರ ಮೇಲೆ ಕೇಸ್ ಹಾಕಿ ಅವರದ್ದು ನಾಯಿಪಾಪಾಡಾಗುವಂತೆ ಮಾಡುತ್ತೇನೆ ಎನ್ನುವುದೂ ಬೆದರಿಕೆಯ ಮತ್ತೊಂದು ರೂಪವಲ್ಲವೇ? ತಾವು ವಿವೇಕಾನಂದರನ್ನು ರೋಗಿಷ್ಠ ಎಂದು ಕರೆದರೆ ತಮ್ಮನ್ನು ಮತ್ತೊಬ್ಬರೂ ಅದೇ ರೀತಿಯ ಪದಗಳಿಂದ ಸಂಬೋಧಿಸಬಾರದು ಎನ್ನುವುದು ಯಾವ ರೀತಿಯ ನ್ಯಾಯ? ಯಾರೋ ಓರ್ವ ತನ್ನ ಕಾಮೆಂಟಿನಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಆರೋಪಿಸುವವರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕರಾವಳಿಯ ಮಧ್ಯಮ ವರ್ಗದ ಜನತೆಯನ್ನು ಷಂಡರೆಂದು ಕರೆಯುವುದರ ಮೂಲಕ, ಪ್ರಧಾನಿಯ ಬಗ್ಗೆ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಪುಂಜಗಳನ್ನು ಪ್ರಯೋಗಿಸುವುದರ ಮೂಲಕ ಯುವ ಜನತೆಗೆ ಯಾವ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದೀರಿ?

ಇಷ್ಟಕ್ಕೂ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಇಂಥದ್ದೊಂದು ಪ್ರಶ್ನೆ ಖಂಡಿತಾ ಕೇಳಬೇಕಿದೆ. ನಿಮಗೆ ಪ್ರಭಾ ಬೆಳವಂಗಲಾ ಪ್ರಕರಣ ಖಂಡಿತಾ ನೆನಪಿರುತ್ತದೆ. ಅಂದೂ ಸಹ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರೇ ಕೇಸ್ ದಾಖಲಿಸಲು ಸಹಾಯ ಮಾಡಿದ್ದರು. ಇರಲಿ, ಅದಾದ ನಂತರ ಮುಖ್ಯಮಂತ್ರಿ ಸಲಹೆಗಾರರಿಗೆ ಅವಾಚ್ಯ ಶಬ್ದಗಳು ಕೇಳಿಸಿದ್ದು ತಮ್ಮನ್ನು ಟೀಕಿಸಿದ ನಂತರವೇ. ಹಾಗಾದರೆ ಫೇಸ್ ಬುಕ್ ನಲ್ಲಿ ಮುಖ್ಯಮಂತ್ರಿ ಸಲಹೆಗಾರರಿಗೆ ಹಾಗೂ ಅವರಿಗೆ ಬೇಕಾದವರ ವಿರುದ್ಧ ಅವಹೇಳನ ನಡೆದರೆ ಮಾತ್ರ ಅದು ಚಾರಿತ್ರ್ಯವಧೆಯಾಗುತ್ತದೆಯೋ? ವಿವೇಕಾನಂದರ ಬಗ್ಗೆ ಅವಹೇಳನಕಾರಿ ಪದಗಳಲ್ಲಿ ಲೇಖನ ಬರೆದಿದ್ದು ಅವರ ಚಾರಿತ್ರ್ಯವಧೆಯಾಗುವುದಿಲ್ಲವೇ? ಅದು ಶಾಂತಿ ಕದಡುವ ಅಪರಾಧವಾಗುವುದಿಲ್ಲವೇ? ಕೇಸ್ ಯಾರ ಮೇಲೆ ದಾಖಲಿಸಬೇಕು ಹೇಳಿ?
ತಮ್ಮನ್ನು ಕೆಟ್ಟ ಪದಗಳಿಂದ ಟೀಕಿಸಿರುವುದರ ಬಗ್ಗೆ ಪ್ರಕರಣ ದಾಖಲಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಹುದ್ದೆಯಲ್ಲಿರುವುದರಿಂದ ಸ್ವಲ್ಪ ಇತರರ ವಿರುದ್ಧ ಬಳಕೆಯಾಗುತ್ತಿರುವ ಅವಾಚ್ಯ ಶಬ್ದಗಳ ಬಗ್ಗೆಯೂ ಗಮನ ಹರಿಸಲಿ, ಅವರ ಪ್ರಭಾವಳಿಯಲ್ಲಿರುವವರೇ ಅನೇಕರು ಅಂತಹ ಶಬ್ದಗಳನ್ನು ಫೇಸ್ ಬುಕ್ ನಲ್ಲಿ ಮೆಸೇಜ್ ಮೂಲಕ ಬಳಸಿರಬಹುದು. ತಮ್ಮ ವಿರುದ್ಧ ಬಳಸಿದರೆ ಮಾತ್ರ ಅದು ಅವಾಚ್ಯ ಶಬ್ದ ಉಳಿದವರ ವಿರುದ್ಧ ಬಳಸಿದರೆ ಅದು ವಾಚ್ಯ ಎನ್ನಲು ಹೇಗೆ ಸಾಧ್ಯ? ಅವಾಚ್ಯ ಶಬ್ದಗಳ ಬಗ್ಗೆ ಅತೀವ ಕಾಳಜಿ ಇರುವವರು ತಮ್ಮ ನಿಂದನೆಗೆ ಸೇಡು ತೀರಿಸಿಕೊಳ್ಳುವುದಕ್ಕೆ ಮಾತ್ರ ಮುಂದಾಗದೇ ಯಾವುದೇ ಇಸಂ ಗಳಿಗೂ ಒಳಗಾಗದೇ ಯಾರೇ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತಹ ಸ್ಥಿತಿ ನಿರ್ಮಿಸಲು ಅವರಿಗೆ ಸಾಧ್ಯವೇ? ಅಂತಹ ಸ್ಥಿತಿಯನ್ನು ನಿರ್ಮಿಸಿ ನರಹಂತಕ, ಸಾವಿನ ವ್ಯಾಪಾರಿ ಎಂಬ ಪದಗಳನ್ನು ಫೇಸ್ ಬುಕ್ ನಲ್ಲಿ ಅಲ್ಲ ಮಾಧ್ಯಮಗಳಲ್ಲೂ ಬಳಕೆಯಾಗದಂತೆ ನೋಡಿಕೊಳ್ಳಲಿ, 'ವಿವೇಕ'ವುಳ್ಳವರನ್ನು ಯಾರೂ ಟೀಕಿಸಿದಂತೆ ನೋಡಿಕೊಳ್ಳಲಿ, ಧರ್ಮಗಳ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸುವವರನ್ನು ನಿಯಂತ್ರಿಸಲಿ. ಹಾಗಾಗುವುದಿಲ್ಲ ಎಂದಾದರೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ? ಎಂದು ಕೇಳಬೇಕಾಗುತ್ತದೆ.
(ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದ್ದೇ ಆಗಿರುತ್ತದೆ ಹೊರತು ಬೆಂಗಳೂರು ವೇವ್ಸ್ ಅದಕ್ಕೆ ಜವಾಬ್ದಾರಿಯಾಗಿರುವುದಿಲ್ಲ - ಸಂ.)

 

Author : ಶ್ರೀನಿವಾಸ್ ರಾವ್

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited