Untitled Document
Sign Up | Login    
ಕೇಂದ್ರದ ಮೋದಿ ಸರ್ಕಾರ್; ವರ್ಕೋಹಾಲಿಕ್ ಕಲ್ಚರ್ !

.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ಬೆನ್ನಲ್ಲೇ ಒಟ್ಟಾರೆ ವರ್ಕಿಂಗ್ ಕಲ್ಚರ್ ಕೂಡಾ ಬದಲಾಗತೊಡಗಿದೆ. ರೆಡ್ ಟೇಪಿಸಂ ಕಲ್ಚರ್ ದೂರಾಗಿ “ವರ್ಕೋಹಾಲಿಕ್’’ ಕಲ್ಚರ್ ವ್ಯಾಪಿಸತೊಡಗಿದೆ.

ವರ್ಕೋಹಾಲಿಕ್ ಮೋದಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ವರ್ಕೋಹಾಲಿಕ್ ಸ್ವಭಾವದವರು. ಮುಂಜಾನೆ 6ರಿಂದ ಮಧ್ಯರಾತ್ರಿವರೆಗೆ ದಿನಕ್ಕೆ ಒಟ್ಟು 18 ತಾಸು ಕೆಲಸ ಮಾಡುವವರು. ದೇಶದ ಕೆಲಸ ದೇವರ ಕೆಲಸ ಎಂದೇ ಪರಿಗಣಿಸಿರುವ ಪ್ರಧಾನಿ, ತನ್ನ ಸಚಿವ ಸಂಪುಟದ ಸಹೋದ್ಯೋಗಿಗಳಿಂದಲೂ ಇಂಥದ್ದೇ ಪರಿಶ್ರಮವನ್ನು ಬಯಸಿರುವುದು ಖಚಿತ. “ಮಿನಿಮಮ್ ಗವರ್ನೆನ್ಸ್ ಮ್ಯಾಕ್ಸಿಮಮ್ ಗವರ್ನಮೆಂಟ್’’ ಧ್ಯೇಯದಡಿ ಸಚಿವ ಸಂಪುಟ ರಚಿಸಿರುವ ಮೋದಿಯವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಎಲ್ಲ ಸಚಿವರಿಂದಲೂ ಸಾಧ್ಯವಾಗುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಅಂಥದ್ದೊಂದು ನಿದರ್ಶನವನ್ನು ಪೂರ್ವ ಭಾರತದ ಆಂಗ್ಲ ಪತ್ರಿಕೆಯೊಂದು ಜೂ.14ರಂದು ವರದಿ ಮಾಡಿದೆ.

ಮೋದಿ ಸಚಿವ ಸಂಪುಟ ಅಧಿಕಾರ ಸ್ವೀಕರಿಸಿ ಇನ್ನೇನು ತಿಂಗಳ ಆಸುಪಾಸಿನಲ್ಲಿದೆ. ಈ ನಡುವೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮೂರ್ನಾಲ್ಕು ಬಾರಿ ಪತ್ರಕರ್ತರನ್ನು ಭೇಟಿ ಮಾಡಿದ್ದರು. ಆಗೆಲ್ಲ ಅವರ ಮುಖಭಾವ ಗಮನಿಸಿದ ಆ ಪತ್ರಿಕೆಯ ದೆಹಲಿ ವರದಿಗಾರ ಅದಕ್ಕೆ ಕಾರಣವೇನೆಂದು ಕೆದಕ್ಕಿದ್ದ. ಪಾಸ್ವಾನ್ ದೆಹಲಿಯ ಬೇಸಿಗೆಯಿಂದ ಅನಾರೋಗ್ಯ ಕಾಡಿದೆ ಎಂದಿದ್ದಾರೆ. ಆದರೂ, ಅದರಿಂದ ಸಮಾಧಾನವಾಗದ ವರದಿಗಾರ, ಸಚಿವ ಸಂಪುಟದ ಸಹೋದ್ಯೋಗಿಗಳ ಬಳಿ ಪಾಸ್ವಾನ್ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಆಗ ಬಹಿರಂಗವಾಗಿದ್ದು ಮೋದಿಯವರ ವರ್ಕೋಹಾಲಿಕ್ ಕಲ್ಚರ್ ಮತ್ತು ಅದರ ಪರಿಣಾಮ!

ಪಾಸ್ವಾನರಿಗೆ ಬೆಳಗ್ಗೆ 6ಕ್ಕೆ ಎದ್ದು ರೂಢಿಯೇ ಇಲ್ಲ. ಡೆಡ್ ಲೈನ್ ಮೇಲೆ ಕೆಲಸ ಮಾಡಿ ಗೊತ್ತೇ ಇಲ್ಲ. ಹೀಗಿರುವಾಗ ಪ್ರಧಾನಿಯವರ ವೇಗಕ್ಕೆ ಹೊಂದಿಕೊಳ್ಳುವುದು ಹೇಗೆ ಸಾಧ್ಯ? ಆದರೂ ಛಲಬಿಡದ ತ್ರಿವಿಕ್ರಮನಂತೆ ಪಾಸ್ವಾನ್ ಕಾರ್ಯನಿರ್ವಹಿಸುತ್ತಿದ್ದಾರಂತೆ!.
ಹಾಗಿದ್ದರೆ ಉಳಿದ ಸಚಿವರ ಪಾಡೇನು ಎಂದು ವಿಚಾರಿಸಿದರೆ, ಹೊಸಬರಿಗೆ ಮೋದಿ ಜತೆಗಿನ ಕೆಲಸ ಹೊಸದು. ಅವರು ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೊಸ ದಿನಚರಿಗೆ ಹೊಂದಿಕೊಳ್ಳಲಾಗದೆ ಹಲವರು ನಿದ್ರಾಹೀನತೆಗೆ ಒಳಗಾಗಿದ್ದಾರೆ. ಒಂದಕ್ಕಿಂತ ಹೆಚ್ಚು ಖಾತೆ ನಿಭಾಯಿಸುತ್ತಿರುವ ಸಚಿವರು ತಮ್ಮ ಗೋಳನ್ನು ಆಪ್ತರ ಬಳಿ ಹಂಚಿಕೊಳ್ಳುತ್ತಿದ್ದಾರೆ. ಸ್ಮೃತಿ ಇರಾನಿ, ಉಮಾಭಾರತಿ, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಮೊದಲಾದವರು ಮೋದಿ ಸ್ಪೀಡಿಗೆ ಅಡ್ಜಸ್ಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.

ಶೀಘ್ರವೇ ಸಂಪುಟ ವಿಸ್ತರಣೆ?: ಮೋದಿ ಅವರ ಈ ಪ್ರಯತ್ನವೇನೋ ಆಡಳಿತ ಸುಧಾರಣೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎನ್ನಬಹುದು. ಕಾರ್ಯಭಾರ ತಾಳದೇ ಸಹೋದ್ಯೋಗಿಗಳು ಕುಸಿಯಬಾರದು ಎಂಬ ಕಾರಣಕ್ಕೆ ಸಂಪುಟ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಡಳಿತ ಯಂತ್ರವೂ ಚುರುಕು: ಸಚಿವರಿಗಷ್ಟೇ ಅಲ್ಲ, ತ್ವರಿತ ಕಾರ್ಯನಿರ್ವಹಣೆಗೆ ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಈಗಾಗಲೆ ನಿರ್ದೇಶಿಸಿದ್ದ ಮೋದಿ, ಆಡಳಿತ ಯಂತ್ರಕ್ಕೂ ಚುರುಕು ಮುಟ್ಟಿಸಿದ್ದಾರೆ. ಇದರ ಬಿಸಿ ರಾಜ್ಯಗಳಿಗೂ ತಟ್ಟಲಿದೆ. ಇ- ಗವರ್ನೆನ್ಸ್ ಅಥವಾ ಇ- ಆಡಳಿತ ಜಾರಿಗೊಳಿಸುವುದಕ್ಕಾಗಿ ಸಂವಹನ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡುವಂತೆ ಸಚಿವಾಲಯಗಳಿಗೆ ಪಿಎಂಒ ಸೂಚಿಸಿದೆ. ಇದರಂತೆ, ರಾಜ್ಯಗಳಿಗೆ ಸುತ್ತೋಲೆ ಕಳುಹಿಸುವುದೂ ಸೇರಿದಂತೆ ಎಲ್ಲ ಸಂವಹನವೂ ಪತ್ರಮುಖೇನ ಮಾತ್ರವಲ್ಲ, ಈ ಮೇಲ್ ಮೂಲಕ ಸಾಫ್ಟ್ ಕಾಪಿ ಕೂಡಾ ಕಳುಹಿಸಬೇಕು.

ಕಚೇರಿಯ ಕಾರ್ಯಕ್ಷಮತೆ ಹೆಚ್ಚಿಸುವುದಕ್ಕಾಗಿ ಕಚೇರಿ ಅವಧಿಯೂ ವಿಸ್ತರಣೆಯಾಗಿದೆ. “ಸರ್ಕಾರಿ ಕೆಲಸ ಬಿಡು’’ ಎಂದು ಉದಾಸೀನತೆ ತೋರುವಂತಿಲ್ಲ. ಅಧಿಕಾರಿಗಳು ಬೆಳಗ್ಗೆ 8.30ಕ್ಕೆ ಕಚೇರಿಗೆ ಬರಬೇಕು. ದಿನದ ಕೆಲಸ ಪೂರ್ಣಗೊಳ್ಳುವ ತನಕ ಕಚೇರಿಯಲ್ಲಿ ಇರಬೇಕು ಎಂಬ ವಾತಾವರಣ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಮೂಲದಿಂದಲೇ ಬದಲಾವಣೆ ಪರ್ವ ಆರಂಭವಾಗಿದೆ.

 

Author : ರಾಜಾ ಗುರು 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited