Untitled Document
Sign Up | Login    
‘ಟಾರ್ಗೆಟ್ ಬೆಂಗಳೂರು’- ಗ್ರೀನ್ ಪೀಸ್ ಅಜೆಂಡಾ?

.

ಸರ್ಕಾರೇತರ ಸಂಸ್ಥೆ(ಎನ್ ಜಿ ಒ)ಗಳು ಎಂದರೆ ಕೂಡಲೇ ಸಮಾಜ ಸೇವೆ, ಪರಿಸರ ರಕ್ಷಣೆ ಒಟ್ಟಾರೆ ಉತ್ತಮ ಸಮಾಜದ ನಿರ್ಮಾತೃಗಳು ಎಂಬ ಭಾವನೆ ವ್ಯಾಪಕವಾಗಿದೆ. ಆದರೆ, ಕೇಂದ್ರದ ಗುಪ್ತಚರ ಇಲಾಖೆ ವರದಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ದೇಶದ ಆರ್ಥಿಕ ಭದ್ರತೆಗೆ ಧಕ್ಕೆ ತರುವಂತಹ ಕೆಲಸವನ್ನು ಕೆಲವು ಸರ್ಕಾರೇತರ ಸಂಸ್ಥೆ (ಎನ್ ಜಿ ಒ)ಗಳು ಮಾಡುತ್ತಿವೆ ಎಂದು ಕೇಂದ್ರ ಗುಪ್ತಚರ ದಳ ಜೂ.3ರಂದು ಪ್ರಧಾನಮಂತ್ರಿಗೆ ವರದಿ ಸಲ್ಲಿಸಿದೆ. 21 ಪುಟಗಳ ವರದಿ ಸದ್ಯಕ್ಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿಗೂ ಕಾದಿದೆ ಆಪತ್ತು: ಗ್ರೀನ್ ಪೀಸ್ ಸಂಸ್ಥೆ ಬೆಂಗಳೂರಿನ ಐಟಿ ಕಂಪನಿಗಳ ಮಾಹಿತಿ ಕಲೆ ಹಾಕಿದ್ದು, ತ್ಯಾಜ್ಯ ವಿಲೇವಾರಿ ವಿಷಯ ಮುಂದಿಟ್ಟು ಆಂದೋಲನ ನಡೆಸಲು ಯೋಜನೆ ಸಿದ್ಧಪಡಿಸಿದೆ. ಈ ಆಂದೋಲನ ಶುರುವಾದರೆ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಾಗುವುದಲ್ಲದೇ, ಆರ್ಥಿಕತೆಯೂ ಕುಸಿಯಲಿದೆ ಎಂದು ಆ ವರದಿ ಎಚ್ಚರಿಸಿದೆ.

ಇದೇ ಗ್ರೀನ್ ಪೀಸ್ ಸಂಘಟನೆ ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿತ್ತು. ಈ ಪ್ರತಿಭಟನೆ ನೇತೃತ್ವವಹಿಸಿದ್ದ ಉದಯ ಕುಮಾರ್ ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಟಿಕೆಟ್ ಮೂಲಕ ಸ್ಪರ್ಧಿಸಿದ್ದರು. ಈ ಸಂಘಟನೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಹಣಕಾಸು ನೆರವು ನೀಡುತ್ತಿದೆ. ಹೀಗಾಗಿ ಅವರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಇದು ಕೆಲಸ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ರೀತಿ, ಕೋರ್ಡೈಡ್, ಅಮ್ನೆಸ್ಟಿ ಮೊದಲಾದ ಎನ್ ಜಿ ಒಗಳಿಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಹಣಕಾಸು ನೆರವು ಲಭಿಸುತ್ತಿದೆ. ಇವುಗಳೆಲ್ಲ ದೇಶದ ಆರ್ಥಿಕ ಭದ್ರತೆಗೆ ಧಕ್ಕೆ ತರುವ ಕೆಲಸಗಳನ್ನೇ ಮಾಡುತ್ತಿವೆ.

ಗ್ರೀನ್ ಪೀಸ್ ಅಷ್ಟೇ ಅಲ್ಲ, ಎನ್ ಜಿ ಒಗಳ ಒಕ್ಕೂಟಗಳಾದ ಮಾಲ್ ಧಾರಿ ರೂರಲ್ ಆ್ಯಕ್ಷನ್ ಗ್ರೂಪ್, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಮೂವ್ ಮೆಂಟ್ ಫಾರ್ ಸೆಕ್ಯುಲರ್ ಡೆಮಾಕ್ರಸಿ, ಗುಜರಾತ್ ಸರ್ವೋದಯ ಮಂಡಲ್ ಮೊದಲಾದವುಗಳೂ ದೇಶದ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವರದಿ ತಿಳಿಸಿದೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆ ಕಾರ್ಯಕರ್ತರು ನರ್ಮದಾ ಬಚಾವೋ ಪ್ರತಿಭಟನೆ ನಡೆಸಿದ್ದರಿಂದಾಗಿಯೇ ಜಿಡಿಪಿ ಬೆಳವಣಿಗೆ 2-3% ರಷ್ಟು ಕುಸಿತ ಕಂಡಿದೆ. ಕಳೆದ ಮಾರ್ಚ್ 15ರಂದು ಗುಜರಾತ್ ವಿಕಾಸ್ ಮಂಚ್ ಲೋಕಾಧಿಕಾರ್ ಆಂದೋಲನ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಗುಜರಾತ್ ಸರ್ಕಾರ ಜಾರಿಗೊಳಿಸಿದ್ದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ವಿರೋಧ ವ್ಯಕ್ತಪಡಿಸಲಾಗಿತ್ತು.

ಗೋಧ್ರೋತ್ತರ ಗಲಭೆ ಸಂತ್ರಸ್ತರನ್ನಷ್ಟೇ ಮುಂದಿಟ್ಟು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರ ಹಿಂದೆ ಮೂವ್ ಮೆಂಟ್ ಫಾರ್ ಸೆಕ್ಯುಲರ್ ಡೆಮಾಕ್ರಸಿ ಸಂಘಟನೆ ಕೈವಾಡ ಇದೆ. ಸರ್ಕಾರ ಎಂ.ಬಿ.ಷಾ ಆಯೋಗ ರಚಿಸಿ ತನಿಖೆಗೆ ಆದೇಶಿಸಿದರೂ ಈ ಸಂಘಟನೆ ನಿರಂತರವಾಗಿ ಸರ್ಕಾರವನ್ನು ಟಾರ್ಗೆಟ್ ಮಾಡಿತ್ತು ಎಂಬುದನ್ನೂ ವರದಿ ಉಲ್ಲೇಖಿಸಿದೆ.

ಈ ನಡುವೆ, ಗುಪ್ತಚರ ವರದಿಯ ಮಾಹಿತಿಗಳನ್ನು ಎನ್ ಜಿಒ ಗಳು ಅಲ್ಲಗಳೆದಿದ್ದು, ವಿದೇಶಿ ಹಣಕಾಸಿನ ನೆರವು ಇಲ್ಲ ಎಂದಿವೆ. ಆದರೂ, ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದರೆ, ಬೆಂಕಿ ಕಿಡಿ ಇಲ್ಲದೆ ಹೊಗೆಯಾಡಲ್ಲ ಎಂಬ ಮಾತು ನಿಜವೆನಿಸುತ್ತದೆ. ಹೀಗಾಗಿ ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಎನ್ ಜಿ ಒಗಳು ಮಾಡಿದರೆ ಎಲ್ಲರಿಗೂ ಉತ್ತಮ. ವಿದೇಶ ರಾಷ್ಟ್ರಗಳು ನೀಡುವ ಹಣಕಾಸು ನೆರವು ಪಡೆಯುತ್ತಿರುವ ಎನ್ ಜಿ ಒಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ದೇಶದ ಭದ್ರತೆಯ ಕಡೆಗೆ ಗಮನಹರಿಸಬೇಕು. ಅದೇ ರೀತಿ, ಸರ್ಕಾರ ಕೂಡಾ ಪ್ರತಿಭಟನೆ ನಡೆಸುವ ಎಲ್ಲ ಎನ್ ಜಿ ಒಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಬಾರದು. ಅವುಗಳ ಉದ್ದೇಶ, ಹಿನ್ನೆಲೆ, ಹಣಕಾಸು ನೆರವು ಎಲ್ಲಿಂದ ಬರುತ್ತಿದೆ. ಯಾವ ರೀತಿ ಬರುತ್ತಿದೆ ಎಂಬುದನ್ನು ಅರಿತು ಕ್ರಮ ಜರಗಿಸುವುದು ಉತ್ತಮ.

 

Author : ಆನಂದ್ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited