Untitled Document
Sign Up | Login    
ಜಗದ್ಗುರು ಶ್ರೀ ವಿದ್ಯಾರಣ್ಯ, ದಕ್ಷಿಣದಲ್ಲಿ ಹಿಂದೂ ಧರ್ಮ ಸಾಮ್ರಾಜ್ಯಕ್ಕೆ ಜೀವವಿತ್ತ ಯತಿವರೇಣ್ಯ!

ಶ್ರೀ ವಿದ್ಯಾರಣ್ಯ

ಸಮಸ್ತ ಹಿಂದೂ ಸಮಾಜ ಶ್ರೀ ಶಂಕರಭಗವತ್ಪಾದರ ಜಯಂತಿಯ ಗುಂಗಿನಲ್ಲಿರಬೇಕಾದರೆ, ಮತ್ತೊಂದು ಹಿತಕರ, ನೆನಪಿನಲ್ಲಿಡಲೇಬೇಕಾದ ಶ್ರೇಷ್ಠ ಯತಿವರ್ಯರ ಜಯಂತಿ ಆಚರಣೆಯ ಭಾಗ್ಯ ಕರ್ನಾಟಕದ ಜನತೆಯದ್ದಾಗಿರುತ್ತದೆ.

ವೈಶಾಖ ಶುಕ್ಲ ಪಂಚಮಿಯಂದು, ಧರ್ಮ ರಕ್ಷಣೆಗಾಗಿಯೇ ಅವತರಿಸಿದ ಶ್ರೀ ಶಂಕರಾಚಾರ್ಯರ ಜಯಂತಿಯಾದ ಬೆನ್ನಲ್ಲೇ, ವೈಶಾಖ ಶುಕ್ಲ ಸಪ್ತಮಿಯಂದು, ಹಿಂದೂ ಧರ್ಮ ಸಾಮ್ರಾಜ್ಯವನ್ನು ರಕ್ಷಿಸಲು ಕಾರಣಪುರುಷರ ಜನ್ಮವಾಗುತ್ತದೆ. ಧರ್ಮ ರಕ್ಷಣೆ ಮಾಡಿದ ಶಂಕರಾಚಾರ್ಯರ ಜಯಂತಿ ಗುಂಗಿನಲ್ಲಿರಬೇಕಾದರೆ ದಕ್ಷಿಣದಲ್ಲಿ ಹಿಂದೂ ಸಾಮ್ರಾಜ್ಯಕ್ಕೆ ಜೀವವಿತ್ತ ಶಂಕರರ ಪರಂಪರೆಯ ವಿದ್ಯಾರಣ್ಯರ ಜಯಂತಿಯನ್ನೂ ಆಚರಿಸುವ ಸುಯೋಗ. ಶಂಕರರು ಸನಾತನ ಧರ್ಮ ಸಂಕಟದಲ್ಲಿದ್ದಾಗ ಧರ್ಮವನ್ನು ಉದ್ಧರಿಸಲು ಅವತರಿಸಿದರು. ವಿದ್ಯಾರಣ್ಯರು ಹಿಂದೂ ಸಾಮ್ರಾಜ್ಯ ಸಂಕಟದಲ್ಲಿದ್ದಾಗ, ಸನಾತನ ಸಾಮ್ರಾಜ್ಯವನ್ನು ಉದ್ಧರಿಸಲು ಅವತರಿಸಿದರು. ಕಾಲಘಟ್ಟಗಳು ಬೇರಾದರೂ ಸಾಧಿಸಿದ ಕಾರ್ಯಗಳು ಒಂದೇ ಅದು ಧರ್ಮ ರಕ್ಷಣೆ.

ಯತಿಗಳೆಂದರೆ ತತಕ್ಷಣ ನೆನಪಾಗುವುದು, ರಾಜ್ಯಕೋಶಗಳಿಗೂ, ಅಧಿಕಾರದಿಂದಲೂ ದೂರ ಉಳಿದು ದಂಡ ಕಮಂಡಲ ಹಿಡಿದು, ಇಹಕ್ಕೂ ತಮಗೂ ಸಂಬಂಧವೇ ಇಲ್ಲವೆಂದು ತಪಸ್ಸಿಗೆ ಕುಳಿತುಬಿಡುವುದು. ಆದರೆ ವಿದ್ಯಾರಣ್ಯರು, ಮುಸಲ್ಮಾನರ ಆಕ್ರಮಣವನ್ನು ತಡೆಯಲು ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಲೆಂದೇ ಸನ್ಯಾಸ ಸ್ವೀಕರಿಸಿದ್ದರು! ಸನ್ಯಾಸ ದೀಕ್ಷೆ ಪಡೆದೇ ದಕ್ಷಿಣದಲ್ಲಿ ಮುಸಲ್ಮಾನರ ಅಕ್ರಮಣವನ್ನು ಸಮರ್ಥವಾಗಿ ಎದುರಿಸಲು ಸಾಮ್ರಾಜ್ಯವನ್ನು ಸ್ಥಾಪಿಸಿದ ಹಿರಿಮೆ ವಿದ್ಯಾರಣ್ಯರದ್ದು.

ದಕ್ಷಿಣ ಭಾರತದ ಮೇಲೆ ಮೊದಲ ಬಾರಿಗೆ ದಂಡಯಾತ್ರೆ ಕೈಗೊಂಡ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ (1296-1316). ಹಿಂದೂ ರಾಜ್ಯಗಳ ಅಧಃಪತನ, ದೇವಾಲಯಗಳ ನಾಶ, ಮಸೀದಿಗಳ ನಿರ್ಮಾಣ, ಮತಾಂತರ ಮೊದಲಾದ ದೌರ್ಜನ್ಯಗಳೇ ಮೊದಲಾದ ಹೀನ ಕೃತ್ಯಗಳೊಂದಿಗೆ ಪರ್ಯವಸಾನ ಕಂಡಿತು. ಮುಂದೆ, ಖಿಲ್ಜಿ ವಂಶಸ್ಥರು ಅಳಿದು ಮಹಮ್ಮದ್-ಬಿನ್-ತುಘಲಕ್ ನ ಆಳ್ವಿಕೆ ಬಂತಾದರೂ (1325- 1351) ಮುಸಲ್ಮಾನರ ದುರಾಕ್ರಮಣ, ಹಿಂದೂ ನಾರಿಯರ ಮೇಲಿನ ಅತ್ಯಾಚಾರ, ಹಿಂದೂ ದೊರೆಗಳ ಮೇಲಿನ ದಬ್ಬಾಳಿಕೆ, ದೌರ್ಜನ್ಯಕ್ಕೆ ಯಾವುದೇ ರೀತಿಯಲ್ಲೂ ಕೊರತೆ ಉಂಟಾಗಲಿಲ್ಲ.

ಮಹಮ್ಮದ್ ಬಿನ್-ತುಘಲಕ್ ಆಡಳಿತಕ್ಕೂ ಮುನ್ನ, ಅಲ್ಲಾ ವುದ್ದೀನ್ ಖಿಲ್ಜಿಯ ಕ್ರೌರ್ಯಗಳನ್ನು ಮುಂದುವರೆಸಿದ್ದು ಮಲ್ಲಿಕಾಫೂರ್. ಈ ಮಲ್ಲಿಕಾಫೂರ್ ನ ಪೂರ್ವಾಶ್ರಮ ಗಮನಿಸಿದರೆ ಈತ ಒಬ್ಬ ಧರ್ಮಧ್ರೋಹಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಂದಿನ ಗುಜರಾತ್ ನ ಸೋಮನಾಥ ದೇವಾಲಯದಲ್ಲಿ ಸೇವಕನಾಗಿ ದುಡಿಯುತ್ತಿದ್ದ ಸಂಸ್ಕೃತಿ ಹೀನ ಮಾಲಿಕ ಕಪೂರ ಇಸ್ಲಾಂ ಗೆ ಮತಾಂತರಗೊಂಡು ಮಲ್ಲಿಕಾಫೂರನಾಗುತ್ತಾನೆ. ಮಧುರೆ,ರಾಮೇಶ್ವರದಲ್ಲಿ ದಾಳಿ ನಡೆಸಿ ಲೂಟಿ ಹೊಡೆದು ಮಸೀದಿ ಕಟ್ಟಿಸಿ, ಖಿಲ್ಜಿ ನಂತರ ದಿಲ್ಲಿ ಸಿಂಹಾಸನವನ್ನು ಏರಲು ಸಂಚು ಮಾಡುತ್ತಾನೆ. ಮಲ್ಲಿಕಾಫೂರ್ ನ ಕರಾಳ ಅಂತ್ಯವಾಗಿದ್ದು ಖುಸ್ರು ಎಂಬ ಮತ್ತೊಬ್ಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹಿಂದೂವಿನಿಂದಲೇ.

ದಿಲ್ಲಿಯ ಗದ್ದುಗೆ ಗಟ್ಟಿ ಇಲ್ಲದೇ ಇದ್ದರೂ ಯವನರು(ಮುಸಲ್ಮಾನರು) ದಕ್ಷಿಣದಲ್ಲಿ ಭದ್ರವಾಗಿದ್ದ ಹಿಂದೂ ರಾಜರ ವಿರುದ್ಧ ದಾಳಿ ನಡೆಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಯವನರ ಆಕ್ರಮಣಕ್ಕೆ ತುತ್ತಾಗಿ ದೇವಗಿರಿ ಯಾದವರು ನಾಮಾವಶೇಷವಾಗಿ ಅವರ ರಾಜಧಾನಿ ದೌಲತಾಬಾದೆಂದು ಹೆಸರು ಪಡೆಯಿತು. ದ್ವಾರಸಮುದ್ರ ಹಳೇಬೀಡಾಯಿತು. ಉಧ್ವಸ್ತವಾದ ಹಿಂದೂ ರಾಜ್ಯಗಳಲ್ಲಿ ಹಿಂದೂ ಧರ್ಮ ಸಂಸ್ಕೃತಿಗಳು ಕಣ್ಮರೆಯಾಗುವ ಪರಿಸ್ಥಿತಿ ಒದಗಿತ್ತು. ಯವನರ ದಾಳಿಗೆ ನಲುಗಿದ್ದ ಜನರಲ್ಲಿ ಸ್ವಧರ್ಮ ಸ್ವರಾಜ್ಯ ಸ್ವಾತಂತ್ರ್ಯಗಳ ಅಭಿಮಾನವೇ ಕಣ್ಮರೆಯಾಗಿತ್ತು. ಥೇಟ್ ನಾವು ಇಂದು ಯಾವಸ್ಥಿತಿಯಲ್ಲಿದ್ದೇವೋ ಅದೇ ಸ್ಥಿತಿ. ಸ್ವಧರ್ಮ ಸ್ವರಾಜ್ಯ ಗಳ ಅಭಿಮಾನ ಮೂಡಿಸುವ ಕಾರಣ ಪುರುಷನ ಉದಯಕ್ಕಾಗಿ ಜನರು ಕಾದು ಕುಳಿತಿದ್ದರು. ಯಾವ ಕಾರಣಪುರುಷನ ಆಗಮನಕ್ಕಾಗಿ ಜನತೆ ಕಾದು ಕುಳಿತಿದ್ದರೋ ಆ ಚೈತನ್ಯ ನಾಡಿನ ಸ್ವಾತಂತ್ರ್ಯದ ಅರುಣೋದಯದಂತೆ ಸಾಯಣರು ಮತ್ತು ಶ್ರೀಮತೀದೇವಿಯವರ ಪುತ್ರನಾಗಿ ಮಾಧವಾಚಾರ್ಯರ ರೂಪದಲ್ಲಿ ಜನ್ಮ ಪಡೆದದ್ದು 1268ರಲ್ಲಿ(ವೈಶಾಖ ಶುಕ್ಲ ಸಪ್ತಮಿಯಂದು).

ಹಂಪಿ(ವಿಜಯನಗರ ಸಾಮ್ರಾಜ್ಯ)
ಮಾಧವನಿಗೆ ಷೋಡಶ ವರ್ಷಗಳು ತುಂಬುವವರೆಗೂ ತಂದೆ ಸಾಯಣರೇ ವೇದಾಭ್ಯಾಸ ಮತ್ತಿತರ ಶಾಸ್ತ್ರಗಳನ್ನು ಹೇಳಿಕೊಟ್ಟಿದ್ದರು. ಆ ನಂತರ ಮಾಧವರ ವಿದ್ಯಾಭ್ಯಾಸ ಮುಂದುವರೆದಿದ್ದು, ವಿದ್ಯೆಗೆ ತವರಾಗಿದ್ದ ಕಂಚೀ ಕ್ಷೇತ್ರದಲ್ಲಿ. ಕಾಂಚಿಯು ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ತತ್ವಗಳನ್ನು ಕಲಿಸುವ ಪ್ರಸಿದ್ಧ ಕ್ಷೇತ್ರ. ವಿದ್ಯಾತೀರ್ಥರ ವಿಶ್ವಾಸ ಗಳಿಸುವಲ್ಲಿ ಮತ್ತು ಅವರನ್ನು ಗುರುವಾಗಿ ಹೊಂದುವಲ್ಲಿ ಮಾಧವ ಅದೃಷ್ಟಶಾಲಿಯಾಗಿದ್ದ.

ವಿದ್ಯಾತೀರ್ಥ, ಶಂಕರಾನಂದ, ಭಾರತೀ ಕೃಷ್ಣ, ಶ್ರೀಕಂಠನಾಥ, ಮೊದಲಾದ ಗುರುಗಳಿಂದಲೂ ಪಡೆದ ಮಾರ್ಗದರ್ಶನ ಅವನ ಮುಂದಿನ ನಿರ್ಧಾರ ರೂಪಿಸುವಲ್ಲಿ ಪಾತ್ರವಹಿಸಿತ್ತು. ಹಿಂದೂ ಧರ್ಮದ ಮೇಲೆ ಮುಸಲ್ಮಾನರ ಆಕ್ರಮಣವನ್ನು ಕಂಡಿದ್ದ ಮಾಧವರು, ಧರ್ಮದ ಪುನರುದ್ಧಾರಕ್ಕಾಗಿ ತಮ್ಮ ಬಾಳನ್ನು ಮೀಸಲಿಟ್ಟು, ವೈದಿಕಧರ್ಮ ಪ್ರವರ್ತಕರಾಗಲು ನಿಶ್ಚಯಿಸಿದ್ದರು. ಈ ಸಂದರ್ಭದಲ್ಲಿ ಸ್ವಾರಸ್ಯಕರ ಘಟನೆಯೊಂದು ಸಂಭವಿಸುತ್ತದೆ. ಕಂಚಿಯ ಚೋಳರಾಜೇಂದ್ರ, ವಿದ್ಯಾತೀರ್ಥರ ವಿದ್ಯಾಪೀಠಕ್ಕೆ ಭೇಟಿ ನೀಡಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳಲು ಒಬ್ಬೊಬ್ಬರನ್ನಾಗಿಯೇ ಕರೆದು ಅವರ ಜೀವಿತದ ಆಕಾಂಕ್ಷೆ ಏನೆಂದು ಪ್ರಶ್ನಿಸುತ್ತಾನೆ. ಮಾಧವನ ಉತ್ತರ ಮಾತ್ರ "ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ" ಎಂದಿತ್ತು. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ ಎಂದಿದ್ದರು." ವಿದ್ಯಾರಣ್ಯರಂತಹ ಶ್ರೇಷ್ಠ ಯತಿಗಳನ್ನು ಕಂಡ ನಾವು, ತಮ್ಮ ಸ್ವಾರ್ಥಕ್ಕೆ, ಸರ್ಕಾರದಿಂದ ಕೋಟಿಗಟ್ಟಲೆ ಹಣ ಪಡೆಯಲು ದೇಶವನ್ನೇ ಮಾರಿಕೊಳ್ಳಲೂ ಯೋಚಿಸದಂತಹ ಡೋಂಗಿ ಸ್ವಾಮೀಜಿಗಳನ್ನು ನೋಡುತ್ತಿರುವುದು ವಿಪರ್ಯಾಸ!

ಆ ಮಾಧವನೇ ಮುಂದೆ ವಿದ್ಯಾರಣ್ಯರೆಂಬ ಹೆಸರಿನಿಂದ ಪ್ರಸಿದ್ಧನಾಗಿ ವಿಜಯನಗರ ಸಂಸ್ಥಾನ ಸ್ಥಾಪಿಸಿದ್ದು. ಮಾಧವರು ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸು ಉತ್ಕಟ ಆಸೆ ಹೊಂದಿದ್ದರಾದರೂ ಅವರು ವಿದ್ಯಾರಣ್ಯರಾಗಲು, ಸನ್ಯಾಸ ಸ್ವೀಕರಿಸಿ, ಸಾಮ್ರಾಜ್ಯ ಸ್ಥಾಪಿಸಲು, ಮಾಧವರೊಂದಿಗೇ ಕಂಚಿಯಲ್ಲಿ ಕಲಿತು, ಮುಂದೆ ವೇದಾಂತದೇಶಿಕರೆಂದು ಹೆಸರು ಪಡೆದ ವೆಂಕಟನಾಥಾರ್ಯರು, ವಿದ್ಯಾರಣ್ಯರಿಗೆ ಮಾನಸಿಕ ಸ್ಥೈರ್ಯ ತುಂಬಿ ಹಿಂದೂ ಸಾಮ್ರಾಜ್ಯ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನೂ ನಾವಿಂದು ಮರೆಯುವಂತಿಲ್ಲ. ಮರೆಯಲೂ ಬಾರದು.
ವಿದ್ಯಾರಣ್ಯರು ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂದು ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಸಂದರ್ಭದ್ಲಲ್ಲಿ, ದಕ್ಷಿಣದ ರಾಜಮನೆತನಗಳೂ ನಿಸ್ತೇಜವಾಗಿದ್ದವು, ಕ್ಷಾತ್ರ ತೇಜಸ್ಸು ಕುಗ್ಗಿತ್ತು. ಧರ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ನಂತರ, ಧರ್ಮ ಸಿಂಹಾಸನವನ್ನು ಏರಬಲ್ಲ ಪ್ರಭುವೇ ಇರಲಿಲ್ಲ. ರಾಜ್ಯ ಸ್ಥಾಪಿಸಲು ಸಂಪತ್ತಿನ ಕೊರತೆಯೂ ಇತ್ತು. ಯಾದವರು ನಿಶ್ಶೇಷರಾಗಿದ್ದರು.

ಕಾಕತೇಯರು ನಿರ್ವೀರ್ಯರಾಗಿದ್ದರು. ಹೊಯ್ಸಳರದ್ದು ನಿಸ್ಸತ್ವ, ಕಂಪಿಲರು ನಾಮಾವಶೇಷ. ಎಲ್ಲರೂ ಮುಸ್ಲಿಮರ ದಾಳಿಗೇ ತುತ್ತಾದವರು. ಊರುರನ್ನು ನುಂಗಿದ್ದ ಮಹಮದ್ ಬಿನ್ ತೊಗಲಕ್, ದಕ್ಷಿಣ ಪಥದಲ್ಲೆಲ್ಲಾ ಗೆಲ್ಲಲು ಸಾಧ್ಯವಾಗದೇ ಇದ್ದ ಏಕೈಕ ಹಿಂದೂ ರಾಜ್ಯವಾಗಿ ಆನೆಗೊಂದಿ ರಾಜ್ಯ ಉಳಿದಿತ್ತು. ಆಳುತ್ತಿದ್ದವನು ಜಂಬುಕೇಶ್ವರ. ಅವನಿಗೋ ಉತ್ತರಾಧಿಕಾರಿಗಳಿರಲಿಲ್ಲ, ಇದ್ದದ್ದು ಗಿರಿಜಾ ಎಂಬ ಮಗಳು. ವಿಧಿವಿಪರೀತ ಎನ್ನುತ್ತೇವಲ್ಲ ಹಾಗೆ, ತೊಗಲಖ್ ಆನೆಗೊಂದಿಯ ಮೇಲೂ ದಾಳಿ ನಡೆಸಿ ಜಂಬುಕೇಶ್ವರನಿಂದ ಆನೆಗೊಂದಿ ಸಾಮ್ರಾಜ್ಯವೂ ತುಗಲಕ್ ನ ತೆಕ್ಕೆ ಸೇರಿತು. ಇದ್ದ ಒಂದು ಅವಕಾಶವೂ ಕೈತಪ್ಪಿತ್ತು.

ಮಾಧವರು(ವಿದ್ಯಾರಣ್ಯರು) ಗುರಿ ಸಾಧನೆಗಾಗಿ ಬಲ ಕ್ರೋಢೀಕರಿಸಲು ತಪಸ್ಸು ಮಾಡಬೇಕೆಂದುಕೊಂಡು, ಸೂಕ್ತ ಸ್ಥಳದ ಆಯ್ಕೆಗಾಗಿ ದೇಶದ ಹಲವೆಡೆ ಸುತ್ತಿ ಕೊನೆಗೆ ಪಂಪಾಕ್ಷೇತ್ರದ ಹೇಮಕೂಟ ತಪಸ್ಸಿಗೆ ತೊಡಗಿದರು. ಆಹಾರದ ಪರಿವೆಯಿಲ್ಲದಂತೆ ನಡೆಸಿದ ತಪಸ್ಸಿನ ಫಲವಾಗಿ ತಾಯಿ ಭುವನೇಶ್ವರಿಯ ಅಭಯ ಸಿಕ್ಕಿತು. ಅಂತರಂಗಕ್ಕೆ ದೊರೆತ ಆದೇಶದಂತೆ ಸಂನ್ಯಾಸಿಯಾಗಲು ನಿರ್ಧರಿಸಿದ ಮಾಧವ ಶೃಂಗೇರಿಯ 11ನೆಯ ಗುರುಗಳಾದ ಶ್ರೀ ಭಾರತೀಕೃಷ್ಣ ತೀರ್ಥರಿಂದ ದೀಕ್ಷೆ ಪಡೆದು ವಿದ್ಯಾರಣ್ಯರೆಂಬ ಹೆಸರು ಪಡೆದು ಕಾಷಾಯ ವಸ್ತ್ರಧಾರಿಯಾದರು. ನಂತರದಲ್ಲಿ ಪಂಪಾಕ್ಷೇತ್ರದಲ್ಲಿ ವಿರೂಪಾಕ್ಷನನ್ನು ಆರಾಧಿಸುತ್ತಾ ತಮ್ಮ ಕನಸು ನನಸು ಮಾಡಬಲ್ಲ ವ್ಯಕ್ತಿಗಳಿಗೆ ನಿರೀಕ್ಷಿಸುತ್ತಿದರು. ನಿರೀಕ್ಷಿತ ಘಳಿಗೆಯಲ್ಲಿ ಹರಿಹರ ಮತ್ತು ಬುಕ್ಕರೆಂಬ ಇಬ್ಬರು ಸೋದರರು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿ ಬಂದರು. ಕಮ್ಮಟದುರ್ಗದ ಅರಸ ಕಂಪಿಲರಾಯನ ಅಳಿಯನೂ, ಸಂಸ್ಥಾನದ ಕೋಶಾಧಿಕಾರಿಯೂ ಆಗಿದ್ದ ಸಂಗಮದೇವನ ಮಕ್ಕಳೇ ಆ ಹರಿಹರ ಮತ್ತು ಬುಕ್ಕ.
ಮಹಮದ್ ಬಿನ್ ತುಘಲಕ್ ರಾಜ್ಯವನ್ನು ಆಕ್ರಮಿಸಿ ಅಲ್ಲಿನ ನಿವಾಸಿಗಳನ್ನು ನಿರ್ದಯವಾಗಿ ಹತ್ಯೆಗೈದು, ಅರಸೊತ್ತಿಗೆಯಲ್ಲಿ ಉಳಿದ ಹರಿಹರ, ಬುಕ್ಕರೂ ಸೇರಿದಂತೆ ಹನ್ನೊಂದು ಜನರನ್ನು ಸೆರೆ ಹಿಡಿದು ಡೆಲ್ಲಿಗೆ ಕರೆದೊಯ್ದು ಸೆರೆಮನೆಯಲ್ಲಿರಿಸಿದ್ದ. ತುಘಲಕನ ತಲೆಕೆಟ್ಟ ದರ್ಬಾರಿನಿಂದ ಅವನ ರಾಜ್ಯದಲ್ಲಿ ಅರಾಜಕತೆಯುಂಟಾದಾಗ ಸೆರೆಮನೆಯಲ್ಲಿದ್ದ ಯುವಕರನ್ನು ಬಿಡುಗಡೆಗೊಳಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡು, ದಕ್ಷಿಣ ಭಾಗದಲ್ಲಿ ಮೂಡಿದ್ದ ಅಶಾಂತಿಯನ್ನು ಶಮನಗೊಳಿಸುವ ಪ್ರಯತ್ನವಾಗಿ ಸೈನ್ಯದೊಂದಿಗೆ ದಕ್ಷಿಣಕ್ಕೆ ಕಳಿಸಿದ ಸಂದರ್ಭವನ್ನು ಉಪಯೋಗಿಸಿಕೊಂಡು, ಹರಿಹರ ಮತ್ತು ಬುಕ್ಕರು ತಪ್ಪಿಸಿಕೊಂಡು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿ ಬಂದಿದ್ದರು. ಇತ್ತ ಆನೆಗೊಂದಿ ರಾಜ್ಯದಲ್ಲಿ ತುಘಲಕ್ ಪ್ರತಿನಿಧಿಯಾಗಿದ್ದ ಮಲಿಕ್ ನಾಯಬ್ ನನ್ನು ಸೆರೆಹಿಡಿದು ರಾಜ ಜಂಬುಕೇಶ್ವರರಾಯನನ್ನು ಬಂಧಮುಕ್ತಗೊಳಿಸಿದರು. ಯಾವುದೇ ರಕ್ತಪಾತವಿಲ್ಲದೆ ಆನೆಗೊಂದಿ ಸ್ವತಂತ್ರವಾಯಿತು. ಅರಮನೆಯ ಮೇಲೆ ಪುನಃ ವರಾಹಧ್ವಜ ಹಾರಾಡಿತು.

1336ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಭಾರತದ ಇತಿಹಾಸದ ಸುವರ್ಣಮಯ ಅಧ್ಯಾಯವೊಂದು ಪ್ರಾರಂಭವಾಯಿತು. ಹರಿಹರ, ಬುಕ್ಕರು ಆ ನಗರಕ್ಕೆ ವಿದ್ಯಾನಗರ ಎಂದು ಹೆಸರಿಡಬಯಸಿದರೂ, ವಿದ್ಯಾರಣ್ಯರು ಅದಕ್ಕೆ ವಿಜಯನಗರವೆಂಬ ಹೆಸರು ಕೊಟ್ಟರು. ವಿಜಯನಗರ ಸಂಸ್ಥಾನ ಚಿಗುರೊಡೆಯಿತು. ಶ್ರೀ ವಿರೂಪಾಕ್ಷ ಎಂಬ ಅಂಕಿತವಿರುವ ಕ್ರಿ.ಶ. 1336ರ ತಾಮ್ರದ ದತ್ತಿಶಾಸನದಲ್ಲಿ ವಿದ್ಯಾರಣ್ಯರ ಸೂಚನೆಯಂತೆ ಹರಿಹರನನ್ನು ಸಿಂಹಾಸನದ ಮೇಲೆ ಕೂರಿಸಿದರು. ವಿಜಯನಗರ ಮುಂದೆ 64 ಚದರ ಮೈಲು ಬೆಳೆಯಿತು.
250ವರ್ಷಗಳವರೆಗೆ ಕರ್ನಾಟಕದ ಹೆಮ್ಮೆಯ ರಾಜಧಾನಿಯಾಗಿ ಮೆರೆಯಿತು.

ಹರಿಹರನಿಗೆ ಆತ್ಮವಿದ್ಯೆ ಬೋಧಿಸಿದ ವಿದ್ಯಾರಣ್ಯರು ಅವನಿಗೆ ಶ್ರೀಮದ್ ರಾಜಾಧಿರಾಜ ಪರಮೇಶ್ವರ, ಅಪರಿಮಿತ ಪ್ರತಾಪವೀರ ಮತ್ತು ನರಪತಿ ಎಂಬ ಬಿರುದುಗಳನ್ನಿತ್ತರು. ಅಂದಿನಿಂದ ಶೃಂಗೇರಿಯ ಗುರು ಪರಂಪರೆಯ ಯತಿಗಳನ್ನು 'ಕರ್ನಾಟಕ ಸಿಂಹಾಸನ ಪ್ರತಿಷ್ಟಾಪನಾಚಾರ್ಯ' ಎಂದೂ ಸಂಬೋಧಿಸಲಾಗುತ್ತಿದೆ.ಅಂದು ಶಂಕರರು ಧರ್ಮ ರಕ್ಷಣೆಗಾಗಿ ಅವತರಿಸಿದರು, ಶಂಕರರ ನಂತರ ಹಿಂದೂ ಧರ್ಮ ಸಂಕಟದಲ್ಲಿದ್ದಾಗ ಹಿಂದೂ ಧರ್ಮದ ಸಾಮ್ರಾಜ್ಯವನ್ನು ರಕ್ಷಿಸಿದವರು ಶ್ರೀ ವಿದ್ಯಾರಣ್ಯರು, ನಾವೇನಾದರೂ ಇಂದು ಹಿಂದು ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣಪುರುಷರೇ ವಿದ್ಯಾರಣ್ಯರು. ವಿದ್ಯಾರಣ್ಯರನ್ನು ಮರೆತರೆ, ಹಿಂದೂ ಸಾಮ್ರಾಜ್ಯವನ್ನೇ ಮರೆತಂತೆ, ದುರದೃಷ್ಟ ಏನು ಗೊತ್ತೆ? ನಮಗೆಲ್ಲಾ ವಿದ್ಯಾರಣ್ಯರ ಜಯಂತಿಯ ನೆನಪೇ ಇಲ್ಲ. ಶಂಕರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಶಂಕರಜಯಂತಿಯಷ್ಟೇ ಮಹತ್ವ ಪಡೆದ ವಿದ್ಯಾರಣ್ಯರ ಜಯಂತಿಯನ್ನು ಮಾತ್ರ ಮರೆಯುತ್ತೇವೆ. ವಿದ್ಯಾರಣ್ಯರನ್ನು ಮರೆತು ಹಿಂದೂ ಸಾಮ್ರಾಜ್ಯದ ಬಗ್ಗೆ ಮಾತನಾಡುವ ನಾವು ಅದೆಷ್ಟು ಕೃತಘ್ನರು?

 

Author : ಶ್ರೀನಿವಾಸ್ ರಾವ್

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited