Untitled Document
Sign Up | Login    
ಢುಂಢಿ ಕಾದಂಬರಿ: ಹಿಂದೂಗಳನ್ನು ಅವಹೇಳನ ಮಾಡುವ ಹಕ್ಕು ಕೊಟ್ಟವರಾರು?..


ಅನಾಯಾಸವಾಗಿ, ಪುಕ್ಕಟೆಯಾಗಿ ಪ್ರಚಾರ ಬೇಕೆ? ಹಾಗಾದರೆ ಹಿಂದೂಗಳ ವಿರುದ್ಧ ಬರೆಯಿರಿ. ಇನ್ನೂ ಹೆಚ್ಚು ಪ್ರಚಾರ, ರಾತೋರಾತ್ರಿ ಕುಖ್ಯಾತಿ ಪಡೆಯಬೇಕೆ ? ಹಾಗಾದರೆ ಹಿಂದೂ ದೇವತೆಗಳನ್ನು ಅವಹೇಳನ ಮಾಡಿ, ವಿಕೃತವಾಗಿ ಚಿತ್ರ ಬರೆಯಿರಿ, ಸಂಶೋಧನೆ ಎಂಬ ಹೆಸರಿನಲ್ಲಿ ಹಿಂದೂ ದೇವರುಗಳನ್ನು ವಿಕೃತವಾಗಿ ಬಿಂಬಿಸಿ, ಹಿಂದೂಗಳ ತಾಳ್ಮೆಯ ಪರೀಕ್ಷೆಯನ್ನು ಮಾಡಿ..

ಇದು ಲಷ್ಕರ್ ಉಗ್ರರು ಕೊಡುತ್ತಿರುವ ಪ್ರಚೋದನೆಯಲ್ಲ.. ಇಂದು ನಮ್ಮ ಸಮಾಜದಲ್ಲಿ ದಿನದಿಂದ ದಿನಕ್ಕೆ, ವ್ಯವಸ್ಥಿತವಾಗಿ ನಡೆಯುತ್ತಿರುವ ಸಂಗತಿ. ಇತ್ತೀಚಿನ ಉದಾಹರಣೆ ಯೋಗೇಶ್ ಮಾಸ್ಟರ್ ಎಂಬ ಹೆಸರಿನ, ಈವರೆಗೂ ಬಹುಶಃ ಯಾರಿಗೂ ಪರಿಚಯವಿರದಿದ್ದ, ರಾತೋರಾತ್ರಿ ಬೆಳಕಿಗೆ ಬರಬೇಕೆಂಬ ಅದಮ್ಯ ಬಯಕೆ ಇರುವ ಒಬ್ಬ ವಿಕೃತ ಮನಸ್ಸಿನ ಲೇಖಕ ಬರೆದ 'ಢುಂಡಿ- ಅರಣ್ಯಕನೊಬ್ಬ ಗಣಪತಿಯಾದ ಕತೆ' ಎಂಬ 'ಸಂಶೋಧನಾ' ಕಾದಂಬರಿ!. ಪುಸ್ತಕದ ಹೆಸರಿನಿಂದ ಆರಂಭವಾಗಿ ಕಾದಂಬರಿಯುದ್ದಕ್ಕೂ, ಎಂಥಾ ಸಾತ್ವಿಕ ಮನಸ್ಸಿನ ಹಿಂದೂವನ್ನೂ ರೊಚ್ಚಿಗೇಳಿಸುವ ರೀತಿಯಲ್ಲಿ ಬರೆದ ಒಂದು ಪುಸ್ತಕ.

ಕೋಟಿ ಕೋಟಿ ಹಿಂದೂಗಳ ಹಾಗೂ ಅಸಂಖ್ಯಾತ ಇತರ ಧರ್ಮಗಳ ಜನರಿಗೂ ಪ್ರಿಯನಾದ, ವಿದ್ಯಾ ಬುದ್ಧಿ ಪ್ರಚೋದಕ ಗಣಪತಿ ನಮ್ಮ ಯೋಗೇಶ್ ಮಾಸ್ಟರ್ ಎಂಬಾತನ ಕೈಯಲ್ಲಿ ಅನಾರ್ಯ, ಕ್ರೂರಿ, ರೌಡಿ, ಇತರರು ತಿಂದು ಬಿಟ್ಟ ಅಹಾರ ಸೇವಿಸುವವ, ಗಿರಿಜನ ಕುಲದ, ಸಿಕ್ಕಸಿಕ್ಕವರೊಂದಿಗೆ ಮಲಗುವ ಪಾರ್ವತಿಗೆ ಹುಟ್ಟಿದವ ಎಂದೆಲ್ಲಾ ಹೇಳಿಸಿಕೊಂಡುಬಿಟ್ಟಿದ್ದಾನೆ. ಲೇಖಕ ಈ 'ಸಂಶೋಧನಾ ಗ್ರಂಥ'ವನ್ನು ಅದ್ಯಾವ ಅಮಲಿನಲ್ಲಿ ಬರೆದಿದ್ದೋ ಗೊತ್ತಿಲ್ಲ, ಆದರೆ ಬೆಳಗಾಗುವುದರೊಳಗೆ ರಾಜ್ಯಾದ್ಯಂತ ತನಗೆ ಬೇಕಾಗಿದ್ದ ಕುಖ್ಯಾತಿ ಗಳಿಸಿದ್ದಂತೂ ನಿಜ.

ಈತ ಇನ್ನೂ ಕೆಲವು ಹೆಜ್ಜೆ ಮುಂದೆ ಹೋಗಿ, ತನ್ನ ಹೆತ್ತ ತಾಯಿಯನ್ನೇ ಕಾಮಿಸುವ ಶಂಬರನೆಂಬ ವ್ಯಕ್ತಿಯನ್ನು ಸೃಷ್ಟಿಸಿ, ತಾಯಿಯೇ ದೇವರು ಎಂಬ ಪೂಜ್ಯಭಾವನೆ ಹೊಂದಿದ ಹಿಂದೂಗಳ ಹೃದಯಕ್ಕೇ ತಿವಿಯುತ್ತಾನೆ. ಇದೂ ಸಾಲದು ಎಂದು ಬ್ರಾಹ್ಮಣನೊಬ್ಬ ಶೂದ್ರನಾದ ಶಂಬರನ ಮನೆಗೆ ಬಂದು ಉಣ್ಣಲು ಗೋಮಾಂಸ ಕೊಡು ಎನ್ನುತ್ತಾನೆ. ಅಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಈರೀತಿ ಬರೆಯಲು ಅದೆಂಥ ಧಾರ್ಷ್ಟ್ಯ ಬೇಕು ಅಲ್ವೇ, ಯೋಗೇಶ್ ಮಾಸ್ಟ್ರೆ ?..ಅಥವಾ, ತಾಯಿಯ ಬಗ್ಗೆ ಈರೀತಿ ಬರೆದವನು ತನ್ನ ತಾಯಿಯ ಬಗ್ಗೆ ಯಾವ ಭಾವನೆ ಇಟ್ಟುಕೊಂಡಿರಬಹುದು ಎಂಬ ಶಂಕೆ ಓದುಗರಿಗೆ ಮೂಡಿದರೆ ತಪ್ಪಿದೆಯೆ?.. ಇಂತಹ ಬರವಣಿಗೆಯಿಂದ ಸಮಾಜಕ್ಕಾಗುವ ಒಳಿತಾದರೂ ಏನು?.

ಅಷ್ಟಕ್ಕೂ ಈ ವಿಕೃತ ಸಾಹಿತಿಗಳಿಗೆ ಹಿಂದೂ ದೇವರುಗಳೇ ಯಾಕೆ ಸುಲಭವಾಗಿ ಸಿಗುತ್ತಾರೆ? ಹಿಂದುಗಳ, ಅವರ ದೇವದೇವತೆಗಳ ವಿರುದ್ಧ ಎನು ಬೇಕಾದರೂ ಬರೆದು, ಚಿತ್ರಿಸಿದರೆ ಯಾವ ಅಪಾಯವೂ ಇಲ್ಲ ಎಂಬ ಭಂಡ ಧೈರ್ಯವಲ್ಲವೆ ಇಂಥಹ ಮತಿಗೇಡಿಗಳನ್ನು ಇನ್ನಷ್ಟು ಪ್ರೇರೇಪಿಸುವುದು?. ಇವರಿಗೆ ಬೇರಾವ ಮತ ಧರ್ಮಗಳ ಹುಳುಕಿನ ಬಗ್ಗೆಯೂ ಬರೆಯುವ, ಮತನಾಡುವ ಧೈರ್ಯ ಯಾಕಿಲ್ಲ?. ಯಾಕೆಂದರೆ, ಅವರಿಗೆ ಜೀವಭಯ ಎಂಬುದೊಂದಿದೆಯಲ್ಲಾ, ಅದಕ್ಕೆ..

ಅನಾದಿ ಕಾಲದಿಂದಲೂ ಹಿಂದೂಗಳು ಪರಧರ್ಮ ಸಹಿಷ್ಣುಗಳು, ಸಾತ್ವಿಕರು, ಶಾಂತಿಪ್ರಿಯರು ಎಂದೆಲ್ಲಾ ಕರೆಸಿಕೊಂಡು ಬಂದವರು. ಜೊತೆಗೆ ತಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಸದಾಕಾಲ ವಿಶ್ಲೇಷಿಸುತ್ತಾ ಬಂದವರು. ನಮ್ಮ ಆಚಾರ ವಿಚಾರ, ನಂಬಿಕೆಗಳನ್ನು ಸದಾ ಒರೆಗಲ್ಲಿಗೆ ಹಚ್ಚಿ ಕಾಲಕಾಲಕ್ಕೆ ತಿದ್ದುತ್ತಾ, ತೀಡುತ್ತಾ ಬಂದವರು. ಆದರೆ ಇದನ್ನೇ ಹಿಂದೂಗಳ 'ವೀಕ್ನೆಸ್' ಎಂದು ತಪ್ಪಾಗಿ ಭಾವಿಸಿ, ಅವರ ಮೂಲಭೂತ ನಂಬಿಕೆ, ಭಾವನೆಗಳಿಗೇ ಕಿಚ್ಚಿಡುವ ಕಾರ್ಯ ಇತ್ತೀಚೆಗೆ ವ್ಯವಸ್ಥಿತವಾಗಿ ನಡೆಯುತ್ತಾ ಬರುತ್ತಿರುವುದು ಆತಂಕದ ವಿಷಯ.

ಟೀವಿ ಮುಂದೆ ಬಂದು ತನ್ನ ಚಿಂತನಾ ಬಂಡವಾಳದ ಪರಿಚಯವನ್ನೂ ಈತ ಮಾಡಿದ ಪರಿ ನೋಡಿದರೆ, ಸ್ವಂತ ಬುದ್ಧಿಯಿಂದ ಬರೆದುದೋ, ಅಥವಾ ಇನ್ನಾವುದೋ ಉದ್ದೇಶದಿಂದ ಬರೆದುದೋ ಎಂಬ ಅನುಮಾನ ಹಲವರಿಗಾಗಿರಬಹುದು. ಕೇಳಿದ ಯಾವುದೇ ಪ್ರಶ್ನೆಗೂ ಸಮಂಜಸವಾದ ಉತ್ತರ ಕೊಡಲಾರದೆ ತತ್ತರಿಸಿದ ಲೇಖಕ ಪೆಚ್ಚುಪೆಚ್ಚಾಗಿ ತನ್ನದು ಸಂಶೋಧನಾ ಕೃತಿಯಲ್ಲ, ಕೇವಲ ಕಾಲ್ಪನಿಕ ಕೃತಿ ಎಂದು ಒಪ್ಪಿದ ರೀತಿ ನೋಡುಗರಿಗೆ ಈತನ ಬಗ್ಗೆ ಮರುಕ ಉಂಟುಮಾಡುವಂತಿತ್ತು!. ಅದು ಕಾಲ್ಪನಿಕವಾದರೆ, ದೇವರು ಎಂದು ಪೂಜಿಸಲ್ಪಡುವ, ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂಥ ಘನಕಾರ್ಯಮಾಡುವ ಹಕ್ಕು ನಿಮಗ್ಯಾರು ಕೊಟ್ಟರು, ಶ್ರೀಮಾನ್ ಯೋಗೇಶ್ ಮಾಸ್ಟರ್ ಅವರೆ ?.. ತೆವಲಿಗೂ ಒಂದು ಮಿತಿಇರಬೇಡವೆ ?.. ಅಲ್ಲದೆ, ಈ ಕಾದಂಬರಿಯನ್ನು ಬರೆಯುವಾಗಲೇ, 'ಇದು ವಿವಾದ ಸೃಷ್ಟಿಸುತ್ತದೆ ಎಂದು ತನಗೆ ತಿಳಿದಿತ್ತು' ಎಂದು ಹೇಳುವಾಗ ಆತನ ಉದ್ದೇಶ ಏನಿತ್ತು ಎಂಬುದೂ ಜನರಿಗೆ ಅರಿವಾಗುತ್ತೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ನೆಪದಲ್ಲಿ ಕೇವಲ ಹಿಂದೂ ದೇವದೇವತೆಯರನ್ನು, ಭಾರತ ಮಾತೆಯನ್ನು ನಗ್ನವಾಗಿ, ಅಶ್ಲೀಲವಾಗಿ ಚಿತ್ರಬಿಡಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿ ಕೊನೆಗೆ ಇಲ್ಲಿನ ಕಾನೂನನ್ನು ಎದುರಿಸುವ ಧೈರ್ಯವಿಲ್ಲದೆ ದೇಶಬಿಟ್ಟು ಓಡಿಹೋದ, ಸೆಕ್ಯುಲರ್ ವಾ(ವ್ಯಾ)ದಿಗಳ ಕಣ್ಮಣಿ, ಎಂ.ಎಫ್.ಹುಸೇನ್ ಹಾಗೂ, ಅವನನ್ನೂ ಮೀರಿಸಿ ವಿತಂಡವಾದಿಗಳ ತಂಡದ ನಾಯಕ ಪಟ್ಟಕ್ಕೆ ಸ್ಪರ್ಧಿಸುವ ತವಕ ಹೊಂದಿದ ಯೋಗೇಶ್ ಮಾಸ್ಟರ್ ನಂಥವರು ಸಮಾಜದ ಸ್ವಾಸ್ಥ್ಯವನ್ನೇ ಹಾಳುಮಾಡುತ್ತಾರೆ. ಇಂತಹ ಮತಿಗೇಡಿಗಳಿಗೆ ಕುಮ್ಮಕ್ಕು ಕೊಡುವ, ಇವರದೇ ರಕ್ತ ಗುಂಪಿಗೆ ಸೇರಿದ ಕೆಲವು ಸಾಹಿತಿಗಳು, ಚಿಂತಕರು ಮತ್ತು ಬುದ್ಧಿಜೀವಿಗಳೆಂಬ ಆಷಾಢಭೂತಿಗಳು ಸಂವಿಧಾನ ಕೊಟ್ಟ ಸ್ವಾತಂತ್ರ್ಯವನ್ನೇ ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ಒಡಕುಂಟುಮಾಡುವ ಕಾರ್ಯದಲ್ಲಿ ತೊಡಗಿರುವುದು ಇನ್ನಷ್ಟು ಆತಂಕದ ವಿಷಯ.

ಯೋಗೇಶ್ ಬರೆದಿರುವ ಪುಸ್ತಕದ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವ, ಅಸಂಖ್ಯಾತ ಭಕ್ತರಿಗೆ ನೋವುಂಟುಮಾಡುವ ಈ ಕೃತಿಯನ್ನು ಸರ್ಕಾರ ಮುಟ್ಟುಗೋಲುಹಾಕಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಬೇರೆಧರ್ಮದ ಬಗ್ಗೆ ಸಣ್ಣದೊಂದು ವಿವಾದ ಸೃಷ್ಟಿಯಾದರೂ ಬೆಚ್ಚಿಬಿದ್ದು ಅಂಥ ಕೃತಿಯನ್ನು ಬ್ಯಾನ್ ಮಾಡುವ ಸರಕಾರ ಈ ವಿಚಾರದಲ್ಲಿ ಮಾತ್ರ ದಿವ್ಯನಿರ್ಲಕ್ಷ್ಯ ತೋರುತ್ತಿರುವುದು ವಿಷಾದದ ಸಂಗತಿ. ಅದಕ್ಕೆ ಕಾರಣ, ಹಿಂದೂಗಳು ವೋಟ್ ಬ್ಯಾಂಕ್ ಅಲ್ಲವಲ್ಲ ?..

 

Author : ಸಮಚಿತ್ತ 

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited