Untitled Document
Sign Up | Login    
ಗಣಪತಿ ಅನಾರ್ಯ, ಕ್ರೂರಿ, ಒರಟನಂತೆ !!!....?

ಆದಿಪೂಜಿತ ಗಣಪತಿ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಶುಸರ್ವದಾ||

ಎಂದು ಆದಿಪೂಜಿತನನ್ನು ವಂದಿಸಿ ಸಕಲ ಕಾರ್ಯವೂ ನಿರ್ವಿಘ್ನವಾಗಿ ಸಾಗುವಂತಾಗಲಿ ಎಂದು ಬೇಡಿಕೊಳ್ಳುತ್ತ ನಮ್ಮ ಕಾರ್ಯವನ್ನು ಆರಂಭ ಮಾಡುತ್ತೇವೆ. ಆತ ಸರ್ವ ವಿಘ್ನನಿವಾರಕ, ಸಿದ್ಧಿ-ಬುದ್ಧಿ ಪ್ರದಾಯಕ ಎಂದು ನಂಬುತ್ತೇವೆ.

ಆದರೆ, ಗಣಪತಿ ದೇವರೇ ಅಲ್ಲ, ಆತ ಅನಾರ್ಯ, ಅನಾಗರಿಕ, ವಿಘ್ನವಿನಾಶಕನಲ್ಲ, ವಿಘ್ನ ನಾಯಕ ಎಂಬ ವಿಚಾರಗಳನ್ನು ಹೇರುವ ಪುಸ್ತಕವೊಂದು ಮಾರುಕಟ್ಟೆಗೆ ಶನಿವಾರ 24,ಆ,2013ರಂದು ಬಿಡುಗಡೆಗೊಂಡಿದೆ. ’ಢುಂಢಿ -ಅರಣ್ಯಕನೊಬ್ಬ ಗಣಪತಿಯಾದ ಕಥೆ' ಎನ್ನುವುದು ಅದರ ಶೀರ್ಷಿಕೆ.

ಲೇಖಕರ ಪ್ರಕಾರ ಗಣಪತಿ ಹಿಂದುಳಿದ, ಹೀನ ಜಾತಿಯ ದೇವತೆ ಎಂದು ಮನುವೂ ಹೇಳಿದ್ದಾನಂತೆ! ಇತರರು ಬಿಟ್ಟ ಆಹಾರವನ್ನು ಸ್ವೀಕರಿಸುವ, ಶೂದ್ರರ ದೇವತೆ ಎಂದು ಲೇಖಕರು ಗಣಪತಿಯನ್ನು ಚಿತ್ರಿಸುತ್ತಾರೆ. ಅವರ ಪ್ರಕಾರ ಗಣಪತಿಯ ಬಗ್ಗೆ ಪುರಾಣಗಳಲ್ಲಷ್ಟೇ ಅಲ್ಲ, ಪುರಾತನ ಶಿಲ್ಪಗಳಲ್ಲೂ ಭಯಂಕರವಾಗಿ, ಆಭರಣ ರಹಿತವಾಗಿ ಚಿತ್ರಿಸಲಾಗಿದೆಯಂತೆ. ವಿನಾಯಕ ವಿಘ್ನಗಳನ್ನು ಉಂಟುಮಾಡಿ ತೊಂದರೆ ಕೊಡುವ ದುಷ್ಟ ಎದು ಮಾನವ ಗ್ರಹ್ಯಸೂತ್ರಗಳಲ್ಲಿ ಹಾಗು ಯಾಜ್ಞವಲ್ಕ್ಯಸ್ಮ್ರತಿಗಳಲ್ಲಿ ವರ್ಣಿಸಲಾಗಿದೆಯಂತೆಯಂತೆ. ಇಂಥ ವಿಘ್ನೇಶ್ವರ ಎಲ್ಲಾ ಕಷ್ಟ ತೊಲಗಿಸಿ ವಿಜಯ ಉಂಟುಮಾಡುವ ದೇವತೆಯಾಗಿ ಹೇಗೆ ಬದಲಾದ? ಶೂದ್ರರ, ಹೀನಜಾತಿಯ ದೇವತೆಯೊಂದಿಗೆ ಒಪ್ಪಂದಕ್ಕೆ ಬರಲು ಹೇಗೆ ಸಾಧ್ಯವಾಯಿತು? ಎಂದು ಲೇಖಕರು ಪ್ರಶ್ನಿಸುತ್ತಾರೆ. ಗಣಪತಿಯು ಅನಾರ್ಯನಾಗಿದ್ದ. ಅವನು ಕ್ರೂರಿಯಾಗಿದ್ದರಿಂದ ಹೆದರಿ ಎಲ್ಲರೂ ಪೂಜಿಸುತ್ತಿದ್ದರು. ಹಾಗಾಗಿ ಉಗ್ರ ಸ್ವಭಾವದ ರುದ್ರನ ಗಣದಲ್ಲಿ ಅವನಿಗೆ ಸ್ಥಾನ ಕೊಡಲಾಗಿದೆ ಎಂದು ಯೋಗೇಶ್ ಮಾಸ್ಟರ್ ಬರೆಯುತ್ತಾರೆ.

ಇದನ್ನು ಸಾಹಿತಿ ವಿಮರ್ಶಕ ಕೆ.ಎನ್.ಗಣೇಶಯ್ಯರಂಥಹವರೂ ಒಪ್ಪಿ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಾರೆ. ಇಂಥ ಸಂಶೋಧನೆಗಳು ಗಣಪತಿಗೆ ಸೀಮಿತವಾಗದೆ ಬೇರೆ ದೇವತೆಗಳ ಕುರಿತೂ ನಡೆಯಬೇಕು ಎಂದು ಲೇಖಕ ಸಿ.ಎನ್ ರಾಮಚಂದ್ರನ್ ಅವರು ಹೇಳುತ್ತಾರೆ. ಈ ವಿಚಾರ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದೆ. ಇಷ್ಟೇ ಅಲ್ಲದೇ ಮಾತೆ ಪಾರ್ವತಿಯನ್ನು ನಿಂದಿಸುವ, ಹಾಗು ಹಲವಾರು ದುಷ್ಟ ವಿಚಾರಗಳು ಇದರಲ್ಲಿವೆ. ಎಂಬುದು ಓದಿದವರ ಅಭಿಪ್ರಾಯ.

ಹಿಂದೂ ಸಂಸ್ಕೃತಿಯನ್ನು, ದೇವಾನುದೇವತೆಗಳನ್ನು, ಧರ್ಮವನ್ನು, ವಿಕೃತವಾಗಿ ಚಿತ್ರಿಸುವ, ವಿಡಂಬಿಸುವ ಪರಿಪಾಠ ಇಂದು ನಿನ್ನೆಯದಲ್ಲ. ಮೊದಲಿನಿಂದಲೂ ಸಮಾಜದಲ್ಲಿ ಇಂತಹ ಒಂದು ಮನಸ್ಥಿತಿಯ ಜನರು ಇದ್ದೇ ಇದ್ದಾರೆ. ಆದರೆ ಅವುಗಳೆಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮ ಹಿಂದೂ ಧರ್ಮಕ್ಕಿದೆ. ಇಂತಹ ಕಲ್ಪಿತ ವಿಶ್ಲೇಷಣೆಗಳಿಂದ ಹಿಂದುಗಳ ನಂಬಿಕೆಗೆ ಯಾವ ತೊಡಕೂ ಇಲ್ಲ. ಇಂತಹ ಅದೆಷ್ಟೋ ವಿತಂಡವಾದಿಗಳನ್ನು ನಮ್ಮ ಧರ್ಮ ನೋಡಿದೆ. ಸಹಿಸಿಕೊಂಡಿದೆ. ಅರಿವನ್ನೂ ಮೂಡಿಸಿದೆ.

ಆದರೆ ನಮ್ಮ ವಿಶಾಲ ಮನೋಭಾವವನ್ನೇ ತಪ್ಪಾಗಿ ಗ್ರಹಿಸಿ ಹಿಂದೂಗಳು ತಮ್ಮ ಧರ್ಮ, ಭಾವನೆ, ನಂಬಿಕೆಗಳನ್ನು ಕೆಣಕಿದರೂ ಸುಮ್ಮನಿರುತ್ತಾರೆ ಎನ್ನುವ ಮನೋಭಾವ ಹೆಚ್ಚುತ್ತಿದೆ. ಸದ್ಯದ ಪರಿಸ್ಠಿತಿಯಲ್ಲಿ ಇದನ್ನು ಬೆಳೆಯಗೊಡದೆ ವಿಕೃತ ಮನಸ್ಥಿತಿಯನ್ನು ಮೊಳಕೆಯಲ್ಲೇ ಚಿವುಟಬೇಕಾದ ಅವಶ್ಯಕತೆ ಇದೆಯಾದ್ದರಿಂದ ಆಳವಾದ ಅಧ್ಯಯನವಿಲ್ಲದ, ಮೂಲ ಆಧಾರ ಪ್ರಾಮಾಣ್ಯವಿಲ್ಲದ ಇಂತಹ ವಿಶ್ಲೇಷಣೆಗಳನ್ನು ಒಪ್ಪಲಾಗದು.

ಹಿಂದೂ ಸಂಪ್ರದಾಯದಲ್ಲಿ ನಂಬಿಕೆ ಇರುವ ಎಲ್ಲರೂ ಇದನ್ನು ಖಂಡಿಸಬೇಕು ಎಂದು ಹಿಂದೂ ಸಂಗಟನೆಗಳು ಆಗ್ರಹಿಸಿವೆ. ಧಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಗೇಶ್ ಮಾಸ್ಟರ್ ಅವರ 365 ಪುಟಗಳ ’ಢುಂಢಿ’ ಪುಸ್ತಕ ಸಮಾಜದ ಶಾಂತಿ ಕದಡುವ ಸಾಧ್ಯತೆಗಳಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮತ್ತು ಪುಸ್ತಕಕ್ಕೆ ಮುಟ್ಟುಗೋಲು ಹಾಕಬೇಕು ಎಂಬ ಕೂಗು ರಾಜ್ಯಾದ್ಯಂತ ಕೇಳಿಬರುತ್ತಿದೆ.

ಕೃತಿಯ ಬಗ್ಗೆ ಮಾಧ್ಯಮಗಳು ಯೋಗೇಶ್ ಮಾಸ್ಟರ್ ಅವರನ್ನು ಕೇಳಿದರೆ ನಾನು ಹೀಗೇ ಎಂದು ಹೇಳಿಲ್ಲ ನನ್ನದೊಂದು ’ಅಟೆಂಪ್ಟು’ ಎನ್ನುತ್ತಾರೆ ಲೇಖಕ. ಆದರೆ "ಡಾಕ್ಟರ್ ಅಟೆಂಪ್ಟೆಡ್ ಬಟ್ ಪೇಶಂಟ್ ಡೈಡ್" ಎಂಬಂತಾಗಬಾರದಲ್ಲವೇ? ಗಣೇಶ ಪ್ರಥಮ ಪೂಜೆಗೆ ಅರ್ಹನಲ್ಲ ಎಂದು ನಾನೆಲ್ಲೂ ಹೇಳಿಲ್ಲ. ಕಾಲ್ಪನಿಕ ಕಥಾ ಹಂದರದಲ್ಲಿ ಕ್ಯಾರೆಕ್ಟರ್ ಗಳು ಹೇಳುತ್ತಾ ಹೋಗುತ್ತವೆ ಎನ್ನುತ್ತಾರೆ ಲೇಖಕ. ಬೇರೆ ಧರ್ಮದ ಬಗ್ಗೆ ಹೀಗೆಲ್ಲಾ ಬರೆಯಬಲ್ಲಿರಾ? ಟಿಪ್ಪು ಕ್ರೂರಿಯಾಗಿದ್ದ ಎಂಬ ಬಗ್ಗೆ ಹಲವಾರು ಐತಿಹಾಸಿಕ ಅಧಾರಗಳಿವೆ. ಅವನ ಬಗ್ಗೆ ಬರೆಯಬಲ್ಲಿರಾ? ಎಂದರೆ ಬೇರೆ ಧರ್ಮದ ಬಗ್ಗೆ ಬರೆಯಲು ಹಕ್ಕಿಲ್ಲಾ, ಆದರೆ ಇದನ್ನು ಬರೆಯುವುದು ನನ್ನ ಹಕ್ಕು ಯಾರು ಏನು ತಿಳಿದು ಕೊಂಡರೂ ನನಗೆ ಸಂಬಂಧವಿಲ್ಲಾ ಎನ್ನುತ್ತಾರೆ!

ಒಮ್ಮೆ ಇದು ಕಲ್ಪಿತವಾದದ್ದು ಎನ್ನುತ್ತಾರೆ. ಇನ್ನೊಮ್ಮೆ ಸಂಶೋಧನಾತ್ಮಕವಾಗಿ ಬರೆದಿದ್ದೇನೆ, ಅದಕ್ಕೆ ಆಧಾರವನ್ನು ಕೊನೆಯ ಪುಟದಲ್ಲಿ ಕೊಟ್ಟಿದ್ದೇನೆ ನೋಡಿ ಎನ್ನುತ್ತಾರೆ. ಸಂಶೋಧನಾತ್ಮಕ ಬರಹಗಳಿಗೆ ಮೂಲ ಆಕರವನ್ನು ಆಧಾರವಾಗಿ ಒದಗಿಸಬೇಡವೇ? ಒಮ್ಮೆ ಅದು ಕಾಲ್ಪನಿಕವಾಗಿದ್ದರೆ ಪರಂಪರಾಗತವಾದ ನಮ್ಮ ನಂಬಿಕೆಗಳನ್ನು ಘಾಸಿಗೊಳಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಎಷ್ಟರ ಮಟ್ಟಿಗೆ ಸರಿ? ಲೇಖಕ ಎಂದಮೇಲೆ ಅವನಿಗೆ ಬದ್ಧತೆ ಬೇಡವೇ? ಸಾಹಿತಿಯಾಗಿ, ಸಂಶೋಧಕನಾಗಿ ಆತನಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ?
ಹಾಗೆಯೇ ನಮ್ಮ ದೇಶ ನಮ್ಮ ಸಂಸ್ಕೃತಿ ಎಂಬ ಮನೆಯ ಒಳಗಡೆ ಕುಳಿತು ಕಂಬ ಕತ್ತರಿಸುವ, ಬುಡ ಅಲುಗಾಡಿಸುವ ಕೆಲಸ ಮಾಡುವುದು ಎಷ್ಟು ಸರಿ?

 

Author : ವಿದ್ಯಾ ಭಟ್ 

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited