ನವದೆಹಲಿ : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಅಕ್ಟೋಬರ್ 1ರಿಂದ 6ರವರೆಗೆ ನಿತ್ಯ 6 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ ನ್ಯಾ.ದೀಪಕ್ ಮಿಶ್ರ ಮತ್ತು ನ್ಯಾ.ಉದಯ್ ಲಲಿತ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಎಲ್ಲ ರಾಜ್ಯಗಳಂತೆ ಕರ್ನಾಟಕವೂ ತನ್ನ ಆದೇಶವನ್ನು ಪಾಲನೇ ಮಾಡಲೇಬೇಕು ಎಂದು ಎಚ್ಚರಿಕೆ ನೀಡಿದೆ.
ಕರ್ನಾಟಕದ ವಕೀಲ ಫಾಲಿ ನಾರಿಮನ್ ರಾಜ್ಯ ವಿಧಾನ ಮಂಡಲ ಕೈಗೊಂಡಿರುವ ನಿರ್ಣಯವನ್ನು ಓದಿದರು. ವಿಧಾನ ಮಂಡಲ ಕೈಗೊಂಡಿರುವ ಸರ್ವಾನುಮತದ ನಿರ್ಣಯ ಮೀರಲು ಸಾಧ್ಯವಿಲ್ಲ. ತಾವು ಬೇರೆ ಯಾವ ವಾದವನ್ನೂ ಮಂಡಿಸುವುದಿಲ್ಲ ಎಂದು ತಿಳಿಸಿದರು.
ನ್ಯಾಯಾಲಯದ ಘನತೆಗೆ ಕರ್ನಾಟಕದಿಂದ ಧಕ್ಕೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಾ ರಾಜ್ಯಗಳು ಪಾಲಿಸಬೇಕು. ಅಂತೆಯೇ ಕರ್ನಾಟಕವೂ ಪಾಲಿಸಬೇಕು. ಮತ್ತೆ 6 ದಿನ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿದಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು. ಅಲ್ಲದೇ ಅಕ್ಟೋಬರ್ 4ರ ಒಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿ, ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದೆ.