ಅಹಮದಾಬಾದ್ : ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ 24 ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಜೂನ್ 17ರಂದು ತಾನು ಪ್ರಕಟಿಸುವುದಾಗಿ ಅಹಮದಾಬಾದಿನ ವಿಶೇಷ ತನಿಖಾ ನ್ಯಾಯಾಲಯ ಪ್ರಕಟಿಸಿದೆ.
24 ಅಪರಾಧಿಗಳು ಈಗಾಗಲೇ ಕಳೆದಿರುವ ಜೈಲು ಶಿಕ್ಷೆಯ ಅವಧಿಯ ವಿವರಗಳನ್ನು ಪ್ರಾಸಿಕ್ಯೂಶನ್ ಗೆ ಸಲ್ಲಿಸಿದ್ದು, ಜೂನ್ 17ರಂದು ಆಪರಾಧಿಗಳ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ವಿಶೇಷ ನ್ಯಾಯಾಧೀಶ ಪಿ.ಬಿ.ದೇಸಾಯಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ 2ರಂದು ತನ್ನ ಅಂತಿಮ ತೀರ್ಪು ನೀಡಿದ್ದ ನ್ಯಾಯಾಲಯ ಒಟ್ಟು 50 ಮಂದಿ ಆರೋಪಿಗಳ ಪೈಕಿ 36 ಮಂದಿಯನ್ನು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಖುಲಾಸೆ ಮಾಡಿ 24 ಮಂದಿ ಆರೋಪಗಳು ಎಂದು ಘೋಷಿಸಿತ್ತು. ಈ ಪೈಕಿ 11 ಆರೋಪಿಗಳ ವಿರುದ್ಧ ಕೊಲೆ ಆರೋಪ ದಾಖಲಾಗಿದ್ದು, ಉಳಿದ 13 ಮಂದಿಯ ವಿರುದ್ಧ ಇತರೆ ಆರೋಪಗಳು ಸಾಬೀತಾಗಿದ್ದವು.
2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹತ್ಯಾಕಾಂಡಗಳಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು 69 ಮಂದಿ ಸಾವನ್ನಪ್ಪಿದ್ದರು.