ಇಸ್ಲಾಮಾಬಾದ್ : ಭಾರತ ಆಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ನಡುವೆ ಮಾಡಿಕೊಂಡಿರುವ ಚಬಾಹರ್ ಬಂದರು ತ್ರಿಪಕ್ಷೀಯ ಒಪ್ಪಂದ ಪಾಕಿಸ್ತಾನದ ರಕ್ಷಣಾ ತಜ್ನರಿಗೆ ತೀವ್ರ ಕಸಿವಿಸಿ ಉಂಟುಮಾಡಿದ್ದು, ಅಲ್ಲಿನ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ.
ಚಬಾಹರ್ ಬಂದರು ಅಭಿವೃದ್ಧಿಗೆ ಭಾರತ, ಆಫ್ಘಾನಿಸ್ತಾನ ಮತ್ತು ಇರಾನ್ ಮಧ್ಯೆ ನಡೆದಿರುವ ತ್ರಿಪಕ್ಷೀಯ ಒಪ್ಪಂದ ಪಾಕಿಸ್ತಾನದ ಭದ್ರತೆಗೆ ಸವಾಲಾಗಿದೆ ಎಂದು ಪಾಕಿಸ್ತಾನ ರಕ್ಷಣಾ ತಂತ್ರಜ್ನರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದಲ್ಲಿ ಸ್ಟ್ರಾಟೆಜಿಕ್ ವಿಷನ್ ಇನ್ಸ್ ಟಿಟ್ಯೂಟ್ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ’ದಕ್ಷಿಣ ಏಷ್ಯಾದಲ್ಲಿ ರಾಷ್ಟ್ರೀಯ ಭದ್ರತಾ, ಧಾಳಿನಿರೋಧಕ ಮತ್ತು ಪ್ರಾದೇಶಿಕ ಸ್ಥಿರತೆ’ ವಿಚಾರದ ಬಗ್ಗೆ ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ಪಾಕಿಸ್ತಾನದ ಇಬ್ಬರು ನಿವೃತ್ತ ಮಾಜಿ ಲೆಫ್ಟಿನೆಂಟ್ ಜನರಲ್ ಗಳು ಭಾಗವಹಿಸಿದ್ದರು. ಈ ವೇಳೆ ಭಾರತದ ಚಬಾಹರ್ ಬಂದರು ಒಪ್ಪಂದದ ಕುರಿತು ಚರ್ಚೆನಡೆಸಲಾಗಿದ್ದು, ಪಾಕಿಸ್ತಾನ ರಾಜತಾಂತ್ರಿಕ ಕೌಶಲ್ಯವನ್ನು ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಭಾರತದ ತ್ರಿಪಕ್ಷೀಯ ಒಪ್ಪಂದ ಹಾಗೂ ಭಾರತದ ನಡೆ ಪಾಕಿಸ್ತಾನದ ಪ್ರಾದೇಶಿಕ ಆರ್ಥಿಕ ಏಕೀಕರಣ, ಆಂತರಿಕ ಶಾಂತಿ ಮತ್ತು ಶಾಂತಿಯುತ ಗಡಿ ನಿರ್ವಹಣಾ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ನದೀಮ್ ಲೋದಿ ತಿಳಿಸಿದ್ದಾರೆ.