ಇರಾನ್ : ಭಾರತ-ಇರಾನ್ ನಡುವೆ ಛಾಬಹಾರ್ ಬಂದರು ಅಭಿವೃದ್ಧಿ ಸೇರಿದಂತೆ 12 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಒಪ್ಪಂದದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಇರಾನ್ ಅಧ್ಯಕ್ಷ ಹಸನ್ ರೋಹಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ, ಛಾಬಹಾರ್ ಒಪ್ಪಂದ ಭಾರತ ಮತ್ತು ಇರಾನ್ ದೇಶಗಳ ನಡುವಿನ ಸಹಕಾರದ ಬೃಹತ್ ಸಂಕೇತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಮಹತ್ವದ ದ್ವಿಪಕ್ಷೀಯ ಒಪ್ಪಂದದಿಂದಾಗಿ ಹೊಸ ಅಧ್ಯಾಯವೊಂದು ಶುರುವಾದಂತಾಗಿದೆ. ಭಾರತ ಮತ್ತು ಇರಾನ್ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಸಮಾನ ದೃಷ್ಟಿಯಿಂದ ನೋಡುವುದಾಗಿ ಹೇಳಿದರು.
ಛಾಬಹಾರ್ ಬಂದರು ಮುಖ್ಯವಾಗಿ ಭಾರತ, ಅಫ್ಘಾನಿಸ್ತಾನ್ ಸೇರಿದಂತೆ ಹಲವು ದೇಶಗಳಿಗೆ ಸಂಪರ್ಕ ಸಾಧನವಾಗಲಿದ್ದು, ಇದರಿಂದ ವ್ಯಾಪಾರ-ವಹಿವಾಟಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಂದರು ಅಭಿವೃದ್ಧಿಗೆ ಭಾರತ 500ಮಿಲಿಯನ್ ಡಾಲರ್ ನೆರವು ನೀಡುವ ಒಪ್ಪಂದಕ್ಕೆ ಸಹಿ ಹಾಕಿರುವುದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.