ಕಾಬೂಲ್ : ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮಹಿಳೆಯೊಬ್ಬರನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಹರಿಸಲ್ಪಟ್ಟ ಮಹಿಳೆ ಕೋಲ್ಕತ್ತ ಮೂಲದ 40 ವರ್ಷದ ಜುದಿತ್ ಡಿಸೋಜಾ ಎಂದು ತಿಳಿದುಬಂದಿದೆ. ಇವರನ್ನು ಕಾಬೂಲ್ನ ತೈಮನಿ ಎಂಬ ಪ್ರದೇಶದಿಂದ ಬಂದೂಕುಧಾರಿಯೊಬ್ಬ ಅಪಹರಿಸಿದ್ದಾನೆ ಎನ್ನಲಾಗಿದೆ.
ಅಪಹರಣಕ್ಕೆ ಒಳಗಾಗಿರುವ ಜುದಿತ್ ಡಿಸೋಜಾ, ಆಘಾ ಖಾನ್ ಫೌಂಡೇಷನ್ನಲ್ಲಿ ಹಿರಿಯ ತಾಂತ್ರಿಕ ಸಲಹೆಗಾರರಾಗಿ ಕೆಲಸ ನಿರ್ಮಿಹಿಸುತ್ತಿದ್ದರು.
ಮಹಿಳೆಯನ್ನು ಅಪಹರಿಸಲಾಗಿರುವ ಪ್ರದೇಶದಲ್ಲಿ ಈ ಮೊದಲೂ ಸಾಕಷ್ಟು ಜನರನ್ನು ಅಪಹರಿಸಲಾಗಿದೆ. ಭಾರತೀಯ ಮಹಿಳೆಯ ಅಪಹರಣದ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಅಪಹರಣ ಕುರಿತಾಗಿ ತಾನು ಹಿರಿಯ ಅಫ್ಘಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತೀಯ ದೂತಾವಾಸ ಹೇಳಿದೆ. ಜುದಿತ್ ಅವರ ಕೋಲ್ಕತ್ತದಲ್ಲಿರುವ ಮನೆಯವರೊಂದಿಗೂ ನಾವು ಸಂಪರ್ಕದಲ್ಲಿದ್ದೇವೆ. ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ಎಲ್ಲಾ ವಿಧದ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.