ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ 6 ದಿವಸಗಳ ಕಾಲ ಐದು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಆಫ್ಘಾನಿಸ್ತಾನ, ಖತಾರ್, ಸ್ವಿಜರ್ಲೆಂಡ್, ಅಮೆರಿಕ ಮತ್ತು ಮೆಕ್ಸಿಕೋಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದಾರೆ, ಈ ಸಂದರ್ಭದಲ್ಲಿ ವಾಣಿಜ್ಯ, ವ್ಯಾಪಾರ, ಇಂಧನ, ಭದ್ರತಾ ಸಹಕಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಸ್ವಿಸ್ ಮತ್ತು ಮೆಕ್ಸಿಕೋಗಳಿಗೆ ಪ್ರಧಾನಿ ಮೋದಿ, 48 ಸದಸ್ಯ ದೇಶಗಳ ಅಣು ಪೂರೈಕೆದಾರರ ಸಮೂಹಕ್ಕೆ ಭಾರತವನ್ನೂ ಸೇರಿಸಲು ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಇದೇ ವಿಚಾರವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಜತೆಗೂ ಮೋದಿ ಅವರು ವಾಷಿಂಗ್ಟನ್ ಭೇಟಿ ವೇಳೆ ಪ್ರಸ್ತಾಪಿಸಲಿದ್ದಾರೆ. ಮೋದಿ-ಒಬಾಮಾ ನಡುವಿನ 7ನೇ ಭೇಟಿ ಇದಾಗಿದೆ. ಅಲ್ಲದೇ ಸ್ವಿಸ್ ಭೇಟಿ ವೇಳೆ ಮಹತ್ವದ ಕಪ್ಪುಹಣ ವಿಚಾರದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.