ಬೆಂಗಳೂರು : ಪೊಲೀಸರ ಮುಷ್ಕರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ, ಸಾಮೂಹಿಕ ರಜೆ ಹಾಕುವ ಪೊಲೀಸರ ತಂತ್ರಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದು, ಯಾವುದೇ ಪೊಲೀಸ್ ಸಿಬಂದಿಗೆ ರಜೆ ಮಂಜೂರು ಮಾಡದಂತೆ ರಾಜ್ಯದ ಎಲ್ಲಾ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಜೂನ್ 4ರಂದು ಪೊಲೀಸರ ಮುಷ್ಕರ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪೊಲೀಸ್ ಸಿಬ್ಬಂದಿಗೆ ರಜೆ ಮಂಜೂರು ಮಾಡದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮುಷ್ಕರಕ್ಕೆ ಇಳಿಯದಂತೆ ಪೊಲೀಸರಿಗೆ ತಿಳಿಹೇಳಿ. ರಜೆ ಕೊಡಲು ಆಗದು ಎಂದು ಹೇಳಿ. ಇಷ್ಟಾದ ಮೇಲೂ ಪೊಲೀಸ್ ಸಿಬ್ಬಂದಿ ಮುಷ್ಕರಕ್ಕೆ ಮುಂದಾದರೆ ಅದನ್ನು ಅಶಿಸ್ತು ಎಂದು ಪರಿಗಣಿಸಿ, ಎಸ್ಮಾ ಜಾರಿ ಸೇರಿದಂತೆ ಯಾವ ಕಠಿಣ ಕ್ರಮಕ್ಕೂ ಹಿಂದೇಟು ಹಾಕಬಾರದು ಎಂದು ಅವರು ತಾಕೀತು ಮಾಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ. ಪ್ರತಿಭಟನೆ ನಡೆಸಿದರೆ ಎದುರಿಸಬೇಕಾದ ಶಿಸ್ತು ಕ್ರಮದ ಕುರಿತು ಸಿಬ್ಬಂದಿಗೆ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಸುತ್ತೋಲೆ ಹೊರಡಿಸಿದ್ದಾರೆ.