ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿನ ಬರ ಪರಿಹಾರ ಕಾಮಗಾರಿಗಳಿಗಾಗಿ 12,272 ಕೋಟಿ ರೂ.ಗಳ ವಿಶೇಷ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ, ಈ ಬೇದಿಕೆ ಇಟ್ಟಿದ್ದಾರೆ. ಮೋದಿ ಅವರ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ, ಪ್ರಧಾನಿ ಕಚೇರಿಯ ಸೌತ್ ಬ್ಲಾಕ್ ನಲ್ಲಿ ಒಂದೂವರೆ ಗಂಟೆಗಳ ಕಾಲ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು.
ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇನೆ. ಬರ ಪರಿಹಾರ ಕಾಮಗಾರಿಗಳಿಗಾಗಿ ವಿಶೇಷ ನೆರವಿನ ರೂಪದಲ್ಲಿ 12,272 ಕೋಟಿ ರೂ.ಗಳ ನೆರವು ಕೋರಿದ್ದೇನೆ ಎಂದು ತಿಳಿಸಿದರು.