ನವದೆಹಲಿ : ಲಂಡನ್ ನ ಮೇಡಮ್ ಟುಸ್ಸಾಡ್ಸ್ ನಲ್ಲಿ ಏ. 28ರಂದು ಅನಾವರಣಗೊಳ್ಳಲಿರುವ ತಮ್ಮದೇ ಪ್ರತಿರೂಪದ ಮೇಣದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿ ಅಚ್ಚರಿಪಟ್ಟಿದ್ದಾರೆ.
ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನ ತಂಡದವರು ಪ್ರಧಾನಿ ಮೋದಿ ಅವರ ಮೇಣದ ಪ್ರತಿಮೆ ನಿರ್ಮಾಣಮಾಡಿದ್ದು, ಈ ಪ್ರತಿಮೆಯನ್ನು ಸದ್ಯ ದೆಹಲಿಯಲ್ಲಿ ಇಡಲಾಗಿದೆ, ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ತೆರಳಲು ಸಾಧ್ಯವಾಗದ ಕಾರಣ ಅವರಿಗೆ ಮುಂಚಿತವಾಗಿ ಪ್ರತಿಮೆ ತೋರಿಸಲಾಗಿದೆ. ಪ್ರತಿಮೆ ವೀಕ್ಷಿಸಿದ ಪ್ರಧಾನಿ ಅದನ್ನು ತಯಾರಿಸಿದ ಕಲಾವಿದರ ತಂಡವನ್ನು ಶ್ಲಾಘಿಸಿದರು. ಏ.28ರಂದು ಮೇಣದ ಪ್ರತಿಮೆಯನ್ನು ಟುಸ್ಸಾಡ್ಸ್ ಮ್ಯೂಸಿಯಂಗೆ ಒಯ್ಯಲಾಗುತ್ತದೆ.
ಇದೇ ಮಾದರಿಯ ಇನ್ನೂ ಮೂರು ಮೇಣದ ಪ್ರತಿಮೆಗಳನ್ನು ನಿರ್ಮಿಸಲಾಗಿದ್ದು, ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಬ್ಯಾಂಕಾಕ್ಗಳಲ್ಲಿ ಬುಧವಾರ ಅನಾವರಣಗೊಳಿಸಲಾಗಿದೆ. ಮೋದಿ ಅವರ ಒಂದು ಮೇಣದ ಪ್ರತಿಮೆ ನಿರ್ಮಾಣಕ್ಕೆ 1.42 ಕೋಟಿ ರೂ. ವೆಚ್ಚ ಮಾಡಲಾಗಿದೆ. ತಮ್ಮ ಪ್ರತಿಮೆಯನ್ನು ವೀಕ್ಷಿಸಿದ ಮೋದಿ, ಮೇಡಮ್ ಟುಸ್ಸಾಡ್ಸ್ ತಂಡ ಅತ್ಯುತ್ತಮವಾಗಿ ಮೇಣದ ಪ್ರತಿಮೆ ನಿರ್ಮಿಸಿದೆ. ಸೃಷ್ಟಿಕರ್ತ ಬ್ರಹ್ಮ ಸಾಮಾನ್ಯವಾಗಿ ಮಾಡುವುದನ್ನು ಕಲಾವಿದರು ಮಾಡಿತೋರಿಸಿದ್ದಾರೆ. ಜನರ ಪ್ರಧಾನ ಸೇವಕನಾಗಿ ನನ್ನದೇ ಮೇಣದ ಪ್ರತಿಮೆ ಭೇಟಿ ಮಾಡುವ ಅವಕಾಶ ನನಗೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.