ನವದೆಹಲಿ : ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದು, ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಶನಿವಾರ ದೆಹಲಿಯಿಂದ ನೇರವಾಗಿ ಮೈಸೂರಿಗೆ ಸಂಜೆ 5.15ಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು,
ಅವಧೂತ ದತ್ತ ಪೀಠಕ್ಕೆ ಭೇಟಿ ನೀಡಲಿದ್ದಾರೆ. ಣಂತರ 6.15ಕ್ಕೆ ಮಹಾರಾಜ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿ, ಭಾನುವಾರ ಬೆಳಗ್ಗೆ 10 ಗಂಟೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ 103ನೇ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮಕ್ಕೆ ತೆರಳಿ ಮಧ್ಯಾಹ್ನ 1.30ರ ವೇಳೆಗೆ ಎಚ್ಎಎಲ್ನ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಹೆಲಿಕಾಪ್ಟರ್ ತಯಾರಿಕಾ ಘಟಕದ ಶಿಲಾನ್ಯಾಸ ಸಮಾರಂಭದಲ್ಲಿ ಭಾಹವಹಿಸಲಿದ್ದಾರೆ.
ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 3.10ಕ್ಕೆ ಆನೇಕಲ್ ತಾಲೂಕಿನ ಜಿಗಣಿಗೆ ಆಗಮಿಸುವ ಪ್ರಧಾನಿ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವತಿಯಿಂದ ಹಮ್ಮಿಕೊಂಡಿರುವ 'ಯೋಗ ಸಂಶೋಧನೆಯ ಮುನ್ನಡೆಗಳು ಮತ್ತು ಅದರ ಅಳವಡಿಕೆ' ಕುರಿತ 21ನೇ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ನಗರದ ಎಚ್ಎಎಲ್ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.