ನವದೆಹಲಿ : ಮಂಗಳವಾರ ಬೆಳಗ್ಗೆ ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಅರಣ್ಯದಲ್ಲಿ ಪತ್ತೆಯಾಗಿದೆ. ಈ ಹೆಲಿಕಾಪ್ಟರ್ ನಲ್ಲಿ ಐಎಎಸ್ ಅಧಿಕಾರಿಯೊಬ್ಬರು ಸೇರಿದಂತೆ ಮೂವರು ವ್ಯಕ್ತಿಗಳಿದ್ದರು.
ಪವನ್ ಹಂಸ್ ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ ಅರುಣಾಚಲ ಪ್ರದೇಶದ ನಾಗಾ ಉಗ್ರರಿಂದ ಪೀಡಿತವಾದ ತಿರಾಪ್ ಜಿಲ್ಲೆಯ ದುರ್ಗಮ ಪ್ರದೇಶದಲ್ಲಿ ಕಣ್ಮರೆಯಾಯಿಗಿತ್ತು. ಹೆಲಿಕಾಪ್ಟರ್ ಅಪರಾಹ್ನ ಪತ್ತೆಯಾಗಿದ್ದು, ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ತಿರಾಪ್ ಜಿಲ್ಲಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ಕಮಲೇಶ್ ಜೋಷಿ, ಒಬ್ಬ ಪೈಲಟ್ ಹಾಗೂ ಒಬ್ಬ ನ್ಯಾವಿಗೇಟರ್ ಹೆಲಿಕಾಪ್ಟರ್‌ನಲ್ಲಿ ಇದ್ದರು. ಇನ್ನೊಂದು ವರದಿಯ ಪ್ರಕಾರ ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರಲ್ಲಿ ಓರ್ವ ಹಿರಿಯ ಪೊಲೀಸ್ ಅಧಿಕಾರಿಯೂ ಇದ್ದರು.
ಎರಡು ಇಂಜಿನ್‌ಗಳ ದೌಫೀನ್ ಎನ್3 ಸಂಖ್ಯೆಯ ಈ ಪವನ್ ಹಂಸ್ ಹೆಲಿಕಾಪ್ಟರ್ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ತಿರಾಪ್ ಜಿಲ್ಲೆಯ ದೇವಮಾಲಿ ಎಂಬಲ್ಲಿ ಹಾರುತ್ತಿದ್ದ ವೇಳೆ ವಾಯು ಸಾರಿಗೆ ನಿಯಂತ್ರಣ ಕೇಂದ್ರದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು. ಈ ಪ್ರದೇಶದಲ್ಲಿ ನಾಗಾ ಉಗ್ರರು ದೊಡ್ಡ ಸಂಖ್ಯೆಯಲ್ಲಿ ಕಾರ್ಯಾಚರಿಸುತ್ತಿದ್ದಾರೆ.
ಮೂಲಗಳ ಪ್ರಕಾರ ತಿರಾಪ್ ಜಿಲ್ಲಾಧಿಕಾರಿ ಕಮಲೇಶ್ ಅವರು ಅಸ್ಸಾಂನ ದೀಬ್ರೂಗಢದಿಂದ ಖೋನ್ಸಾಗೆ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ಹೆಲಿಕಾಪ್ಟರ್ ನಾಪತ್ತೆಯಾಯಿತು.
ನಾಪತ್ತೆಯಾಗಿರುವ ಹೆಲಿಕಾಪ್ಟರ್‌ನ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ ಎಂದು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.