ಗುರುದಾಸ್ ಪುರ / ಪಂಜಾಬ್ : ಭಾರತ-ಪಾಕಿಸ್ತಾನ ಗಡಿಯಂಚಿನಲ್ಲಿರುವ, ಪಂಜಾಬ್ ರಾಜ್ಯದ ಗುರುದಾಸ್ ಪುರದಲ್ಲಿ ಪಾಕಿಸ್ತಾನಿ ಉಗ್ರರ ದಾಳಿ ಅಂತ್ಯಗೊಂಡಿದೆ. ಪೊಲೀಸ್ ಠಾಣೆಯಲ್ಲಿ ಅಡಗಿದ್ದ ಎಲ್ಲಾ ಮೂವರು ಉಗ್ರರನ್ನು ಪೊಲೀಸರು ಹತಗೊಳಿಸಿದ್ದಾರೆ ಮತ್ತು ಕಾರ್ಯಾಚರಣೆ ಅಂತ್ಯಗೊಂದಿದೆ ಎಂದು ವರದಿಯಾಗಿದೆ.
ಈ ದಾಳಿಯಲ್ಲಿ ಒಟ್ಟು 11 ಜನರು ಸಾವನ್ನಪ್ಪಿದ್ದು, ಅದರಲ್ಲಿ 5 ಪೊಲೀಸರು, 3 ನಾಗರಿಕರು ಹಾಗೂ 3 ಉಗ್ರರು ಸೇರಿದ್ದಾರೆ.
ಪೊಲೀಸರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಗುರುದಾಸ್ ಪುರದ ಪೊಲೀಸ್ ಸುಪರಿಂಟೆಂಡೆಂಟ್ ಬಲ್ಜಿತ್ ಸಿಂಗ್ ಅವರು ಹತ್ಯೆಯಾಗಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಮೂಲಗಳ ಪ್ರಕಾರ ಉಗ್ರರು ಗಡಿಯಾಚೆಯಿಂದ ಬಂದಿದ್ದಾರೆ ಎಂದು ಶಂಕಿಸಲಾಗಿದೆ.
ಗೃಹ ಸಚಿವ ರಾಜನಾಥ ಸಿಂಗ್ ಅವರು ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ವಿವರಣೆ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.
ಉಗ್ರರ ದಾಳಿಯ ಹಿನ್ನಲೆಯಲ್ಲಿ ಸೋಮವಾರ ಸಂಜೆ 6 ಗಂಟೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಪರಿವೀಕ್ಷಣೆ ಸಭೆ ನಡೆಯಲಿದ್ದು, ಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಕ್ಷಣಾ ಅಧಿಕಾರಿಗಳು ಹಾಗೂ ಗೃಹ ಸಚಿವಾಲಯದ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಈ ಮಧ್ಯೆ ಸೋಮವಾರ ಬೆಳಗ್ಗೆ ಉಗ್ರರ ದಾಳಿಗೊಳಗಾದ ಬಸ್ ಚಾಲಕನನ್ನು ಗೌರವಿಸಲು ಪಂಜಾಬ್ ಸರಕಾರ ನಿರ್ಧರಿಸಿದೆ.