ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಮಹತ್ವಾಕಾಂಕ್ಷಿ ’2022ರೊಳಗೆ ಎಲ್ಲರಿಗೂ ಮನೆ' ಯೋಜನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ.
ಈ ಯೋಜನೆ ಯಡಿ ನಗರ ಪ್ರದೇಶಗಳ ಬಡವರು ಮತ್ತು ಕೊಳಚೆ ಪ್ರದೇಶಗಳ ನಿವಾಸಿಗಳು ಗೃಹ ಸಾಲ ಪಡೆದಲ್ಲಿ, ಅದರ ಶೇ.6.50ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ. ರಾಷ್ಟ್ರೀಯ ನಗರ ಗೃಹ ನಿರ್ಮಾಣ ಕಾರ್ಯಕ್ರಮದಡಿ ಮುಂದಿನ 7 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಗೆ ಇದೇ ತಿಂಗಳ 25ರಂದು ಚಾಲನೆ ದೊರಕಲಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಈ ಯೋಜನೆ ಕುರಿತಾದ ಅಂತರ್ ಸಚಿವಾಲಯ ಸಮಿತಿ ನೀಡಿದ ಶಿಫಾರಸುಗಳನ್ನು ಅಂಗೀಕರಿಸಿತು. ಯೋಜನೆ ಜಾರಿಯಾದಲ್ಲಿ ಸಾಲ ಪಡೆದ ಕೊಳಚೆ ನಿವಾಸಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗದ ವರು (ಇಡಬ್ಲ್ಯುಎಸ್) ಮತ್ತು ಕಡಿಮೆ ಆದಾಯ ಸಮೂಹದವರ (ಎಲ್.ಐ.ಜಿ) ಬಡ್ಡಿಯ ಹೊರೆ 2.30 ಲಕ್ಷ ರೂ. ಕಡಿಮೆಯಾಗಲಿದ್ದು, ಮಾಸಿಕ ಸಾಲದ ಕಂತು (ಇಎಂಐ) 2852 ರೂ.ನಷ್ಟು ಅಗ್ಗವಾಗಲಿದೆ. ಈ ಯೋಜನೆಯ ಅನುಸಾರ ಫಲಾನುಭವಿಗೆ ಗರಿಷ್ಠ 6 ಲಕ್ಷ ರೂ. ಸಾಲ ಲಭಿಸುತ್ತದೆ. ಇದಕ್ಕೆ 15 ವರ್ಷ ಸಾಲ ಮರುಪಾವತಿಗೆ ಅವಕಾಶವಿರುತ್ತದೆ. ಸುಮಾರು ಶೇ.10.50 ಬಡ್ಡಿದರ ಪರಿಗಣಿಸಿದರೆ ಮಾಸಿಕ ಮರುಪಾವತಿ ಕಂತು (ಇಎಂಐ) 6,632 ರೂ. ಆಗುತ್ತದೆ.
ಆದರೆ, ಈಗ ಸರ್ಕಾರವು ಶೇ.6.50ರಷ್ಟು ಬಡ್ಡಿ ಸಹಾಯಧನ ನೀಡಲು ಮುಂದಾಗಿದ್ದು, ಇದರಿಂದ ಇಎಂಐ ಪ್ರಮಾಣ ಮಾಸಿಕ 4,050 ರೂ.ಗೆ ಇಳಿಯಲಿದೆ. ಇದರಿಂದ ಪ್ರತಿ ತಿಂಗಳು ಇಎಂಐಗೆ 2,582 ರೂ.ನಷ್ಟು ಸಬ್ಸಿಡಿ ಲಭಿಸಿದಂತಾಗುತ್ತದೆ. ಇದರಿಂದ ಪ್ರತಿಯೊಬ್ಬರಿಗೂ 2.30 ಲಕ್ಷ ರೂ.ವರೆಗೂ ಸಬ್ಸಿಡಿ ಸಿಕ್ಕಂತೆ ಆಗುತ್ತದೆ.
ರಾಷ್ಟ್ರೀಯ ನಗರ ಗೃಹ ನಿರ್ಮಾಣ ಕಾರ್ಯಕ್ರಮದಡಿ ಫಲಾನುಭವಿಗಳನ್ನು 4 ರೀತಿಯಲ್ಲಿ ವರ್ಗೀಕರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಈ ಹಿಂದೆಯೇ ಅನುಮೋದನೆ ನೀಡಿದೆ. ಕೊಳಚೆ ನಿವಾಸಿಗಳು, ಎಲ್ಐಜಿ ಮತ್ತು ಇಡಬ್ಲ್ಯುಎಸ್ ಫಲಾನುಭವಿಗಳು, ಬಡವರಿಗಾಗಿ ಖಾಸಗಿ-ಸರ್ಕಾರಿ ಸಹಭಾಗಿತ್ವದ ಯೋಜನೆಗಳು ಹಾಗೂ ಆರ್ಥಿಕವಾಗಿ ದುರ್ಬಲರಾದ ನಗರ ನಿವಾಸಿಗಳು ಮನೆ ದುರಸ್ತಿ ಮಾಡಲು ಅಥವಾ ಹೊಸ ಮನೆ ಕಟ್ಟಿಸಲು ಎಂದು ವರ್ಗೀಕರಿಸಲಾಗಿದೆ.