ನವದೆಹಲಿ : ದೇಶದ ಮೊದಲ ಸೆಮಿ-ಹೈಸ್ಪೀಡ್ ರೈಲು ಗತಿಮಾನ್ ಎಕ್ಸ್ ಪ್ರೆಸ್ ಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಸಿರು ನಿಶಾನೆ ತೋರಿದರು. ದಿಲ್ಲಿ-ಆಗ್ರಾ ನಡುವಿನ 200 ಕಿ.ಮೀ. ದೂರವನ್ನು ಕೇವಲ 100 ನಿಮಿಷಗಳಲ್ಲಿ ಈ ರೈಲು ಕ್ರಮಿಸಲಿದೆ.
ರೈಲಿನ ಪರಿಚಾರಿಕೆಯರು ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು. ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಓಡುವ ಗತಿಮಾನ್ ಎಕ್ಸ್ಪ್ರೆಸ್ ರೈಲು, ನಿಜಾಮುದ್ದೀನ್ ಸ್ಟೇಶನ್ನಿಂದ ತನ್ನ ಮೊದಲ ಯಾನವನ್ನು ಆರಂಭಿಸಿತು.
ಗತಿಮಾನ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿರುವುದು ಭಾರತೀಯ ರೈಲ್ವೇಯ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ ಎಂದು ಸಚಿವ ಸುರೇಶ್ ಪ್ರಭು ಹೇಳಿದರು. ರಾಷ್ಟ್ರ ರಾಜಧಾನಿ ಹಜರತ್ ನಿಜಾಮುದ್ದೀನ್ ಸ್ಟೇಶನ್ನಿಂದ ಆಗ್ರಾದ ಕಂಟೋನ್ಮೆಂಟ್ ಸ್ಟೇಶನ್ಗೆ, ಶುಕ್ರವಾರದ ಹೊರತಾಗಿ, ವಾರದ ಉಳಿದ ಎಲ್ಲ ಆರು ದಿನಗಳಂದು ಓಡಾಡುತ್ತದೆ.
ದಿನಂಪ್ರತಿ ಬೆಳಗ್ಗೆ 8.10 ಕ್ಕೆ ನಿಜಾಮುದ್ದೀನ್ ಸ್ಟೇಶನ್ನಿಂದ ಹೊರಡುವ ಈ ರೈಲು ಆಗ್ರಾ ಕಂಟೋನ್ಮೆಂಟನ್ನು 9.50ಕ್ಕೆ ತಲುಪುತ್ತದೆ. ಸಿಂಗಲ್ ಎಸಿ ಚೇರ್ ಕಾರ್ ಸೀಟಿಗೆ ಪ್ರಯಾಣ ದರ 750 ರೂ. ಎಕ್ಸಿಕ್ಯುಟಿವ್ ಎಸಿ ಚೇರ್ ಕಾರ್ ಸೀಟಿಗೆ ದರ 1,500 ರೂ. ಗತಿಮಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಎರಡು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ಗಳು ಹಾಗೂ ಎಂ ಎಸಿ ಚೇರ್ ಕಾರ್ ಕೋಚ್ಗಳನ್ನು ಅಳವಡಿಸಲಾಗಿದೆ.