ಪಾಟ್ನಾ : ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಾಗಿ ಬಿಜೆಪಿ ಘೋಷಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವುದಿಲ್ಲ ಎಂದು ಬಿಹಾರ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಬಿಜೆಪಿ ಈಗ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವುದಿಲ್ಲ. ಬಿಜೆಪಿಯಲ್ಲಿ ಅನೇಕ ಪ್ರಮುಖ ನಾಯಕರಿದ್ದಾರೆ. ನರೇಂದ್ರ ಮೋದಿಯವರು ಬಿಜೆಪಿಯ ಮುಖವಾಗಿದ್ದು, ಅವರ ನಾಯಕತ್ವದಡಿಯಲ್ಲಿ ಚುನಾವಣೆಯನ್ನು ಎದುರಿಸುವುದಾಗಿ ತಿಳಿಸಿದರು.
ಬಿಜೆಪಿ ಸಹ ಮುಖ್ಯಮಂತ್ರಿ ಹೆಸರನ್ನು ಘೋಷಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಒತ್ತಾಯವನ್ನು ಇದೇ ವೇಳೆ ಅನಂತ್ ಕುಮಾರ್ ತಳ್ಳಿ ಹಾಕಿದರು.
ಬಿಜಿಪಿಯ ಮೈತ್ರಿ ಪಕ್ಷ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖ್ಯಸ್ಥ ಕೇಂದ್ರ ಸಚಿವ ಉಪೇಂದ್ರ ಕುಶ್ವಹ ಅವರ ಹೆಸರನ್ನು ಘೋಷಿಸಬೇಕೆಂದು ಹೇಳಿತ್ತು. ಬಿಜೆಪಿಯ ಇನ್ನೊಂದು ಮೈತ್ರಿಕೂಟ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ, ಪಾಸ್ವಾನ್ ಅವರು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಹೇಳಿದೆ. ಕಳೆದ ವಾರ ಬಿಜೆಪಿ ಜೊತೆ ಸೇರಿಕೊಂಡ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಕೂಡ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ತಿಳಿಸಿದ್ದರು.