ನವದೆಹಲಿ : ಲಲಿತ್ ಮೋದಿ ವಿದೇಶದಲ್ಲಿ ವಾಸಿಸಲು ನೆರವು ನೀಡಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಿದ್ದು ಸುಳ್ಳು. ಕೇಂದ್ರ ಎನ್.ಡಿ.ಎ ಸರ್ಕಾರ ಒಬ್ಬ ಕ್ರಿಮಿನಲ್ ಗೆ ರಕ್ಷಣೆ ನೀಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಗಂಭೀರವಾಗಿ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಲ್ ಟಿ20 ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಣ ದುರುಪಯೋಗದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೇ ಮ್ಯಾಚ್ ಫಿಕ್ಸಿಂಗ್ ನಲ್ಲೂ ಶಾಮೀಲಾಗಿದ್ದಾರೆ. ಆದರೂ ಕೇಂದ್ರ ಸರ್ಕಾರ ಲಲಿತ್ ಮೋದಿಗೆ ಪಾಸ್ ಫೋರ್ಟ್ ಪಡೆಯಲು ನೆರವು ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರ ಓರ್ವ ದೇಶಭ್ರಷ್ಟನಿಗೆ ಸಹಾಯ ಮಾಡುತ್ತಿದೆ ಎಂದು ದೂರಿದರು.
ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ಕೊಡಬೇಕು ಎಂದು ಶರ್ಮಾ ಒತ್ತಾಯಿಸಿದರು.