ನವದೆಹಲಿ : ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 64 ಪೈಸೆ ಏರಿಸಲಾಗಿದೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ 1.35 ರೂ. ಇಳಿಕೆ ಮಾಡಲಾಗಿದೆ.
ನೂತನ ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿನ ವ್ಯತ್ಯಾಸದ ಅನ್ವಯ ಈ ಬದಲಾವಣೆ ಮಾಡಲಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ. ಇದರೊಂದಿಗೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಹೆಚ್ಚು ಕಡಿಮೆ 8 ರೂ.ನಷ್ಟು ಏರಿಕೆಯಾದಂತಾಗಿದೆ.
ಸೋಮವಾರದ ಬದಲಾವಣೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 66.29 ರೂ.ನಿಂದ 66.93 ರೂ.ಗೆ ಏರಲಿದೆ. ಅದೇ ರೀತಿ ಡೀಸೆಲ್ ಬೆಲೆ ಲೀ.ಗೆ 52.28 ರೂ.ನಿಂದ 50.93 ರೂ.ಗೆ ಇಳಿಯಲಿದೆ.
ಕಳೆದ ಮೇ ತಿಂಗಳ ಬಳಿಕ ತೈಲ ಕಂಪನಿಗಳು ಮೂರನೇ ಬಾರಿ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿವೆ. ಈ ಹಿಂದೆ ಮೇ 1ರಂದು 3.96 ರೂ. ಮತ್ತು ಮೇ 16ರಂದು ಪೆಟ್ರೋಲ್ ಬೆಲೆಯನ್ನು 3.13 ರೂ. ಏರಿಕೆ ಮಾಡಿದ್ದವು. ಇನ್ನು ಈ ಹಿಂದೆ ಸತತ ಎರಡು ಬಾರಿ ಏರಿಕೆಗೆ ಒಳಗಾಗಿದ್ದ ಡೀಸೆಲ್ ಬೆಲೆ ಈ ಬಾರಿ ಇಳಿಕೆಯಾಗಿದೆ.