ಬೆಂಗಳೂರು : ಭ್ರಷ್ಟಾಚಾರ ಆರೋಪವಿರುವ ಅಧಿಕಾರಿಗಳ ಮೇಲೆ ವಿಚಾರಣೆ ನಡೆಸಲು ಲೋಕಾಯುಕ್ತ ಶಿಫಾರಸ್ಸನ್ನು ರದ್ದು ಮಾಡುವ ಮೂಲಕ ಭ್ರಷ್ಟರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವಅಧಿಕಾರಿಗಳ ಮೇಲೆ ವಿಚಾರಣೆ ನಡೆಸಲು ಅನುಮತಿ ಕೊಡಬೇಕೆಂದು ಲೋಕಾಯುಕ್ತ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಆದರೆ ಅದನ್ನು ತಿರಸ್ಕರಿಸಿರುವುದು ಭ್ರಷ್ಟರನ್ನು ಸರ್ಕಾರವೇ ರಕ್ಷಣೆ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಭ್ರಷ್ಟರನ್ನೇ ರಕ್ಷಣೆ ಮಾಡಲು ಹೊರಟಿರುವುದು ದುರದೃಷ್ಟಕರ! ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಎಂದರು.
ಇದೇ 29ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆ ಮತ್ತು ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪ ಎದುರಿಸುತ್ತಿರುವ ಶಿವರಾಜ್ ತಂಗಡಗಿಯನ್ನು ಸಚಿವ ಸಂಪುಟದಿಂದ ಕೈಬಿಡುವ ಕುರಿತು ಪ್ರಚಲಿತ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತೇವೆ ಎಂದರು.
ಕಬ್ಬು ಬೆಳೆಗಾರರಿಗೆ 4,600 ಕೋಟಿ ರೂ. ಬಾಕಿ ನೀಡಬೇಕು, ರೈತರು ತೀವ್ರ ಕಂಗಾಲಾಗಿದ್ದು , ಸರ್ಕಾರ ಸಹಾಯ ಹಸ್ತ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಶಾಮೀಲಾಗಿದ್ದು, ರೈತರನ್ನು ಕಡೆಗಣಿಸಿದೆ ಎಂದು ಕಿಡಿಕಾರಿದರು.
ರಾಜ್ಯಪಾಲರು ಕಾರ್ಯಾಂಗದ ಮುಖ್ಯಸ್ಥರಾಗಿ ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತಾರೆ. ಮುಖ್ಯಮಂತ್ರಿಗಳು ಅವರ ಜೊತೆ ಉತ್ತಮ ಸಂಬಂಧ ಹೊಂದಿರಬೇಕು. ಆದರೆ ಸಿದ್ದರಾಮಯ್ಯನವರು ರಾಜ್ಯಪಾಲರೊಂದಿಗೆ ಸಂಘರ್ಷಕ್ಕಿಳಿಯುತ್ತಿರುವುದು ತಪ್ಪು ಎಂದರು.