ನವದೆಹಲಿ : ದೇಶಾದ್ಯಂತ ನಿಷೇಧಕ್ಕೊಳಗಾದ ಮ್ಯಾಗಿ ನೂಡಲ್ಸ್ನ ಜಾಹೀರಾತು ಪ್ರಚಾರಕ್ಕೆ ನೀಡಿದ್ದ ಮಹತ್ವವನ್ನು, ಅದರ ಗುಣಮಟ್ಟ ಪರೀಕ್ಷೆಗೆ ನೆಸ್ಲೆ ಕಂಪನಿ ಕೊಟ್ಟಿರಲಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಕಳೆದ ವರ್ಷ ಮ್ಯಾಗಿ ನೂಡಲ್ಸ್ ಪರ ಜಾಹೀರಾತು ಹಾಗೂ ಮಾರಾಟ ಪ್ರಚಾರಕ್ಕೆ ನೆಸ್ಲೆ ಕಂಪನಿ ಬರೋಬ್ಬರಿ 445 ಕೋಟಿ ರೂ. ವ್ಯಯಿಸಿದೆ. ಆದರೆ, ಅದರ ಗುಣಮಟ್ಟ ಪರೀಕ್ಷೆಗೆ ಜಾಹೀರಾತು ವೆಚ್ಚದ ಶೇ.5ರಷ್ಟು ಅಂದರೆ, ಕೇವಲ 19 ಕೋಟಿ ರೂ. ವಿನಿಯೋಗಿಸಿದೆ. ನೆಸ್ಲೆ ಕಂಪನಿಯ ವಾರ್ಷಿಕ ಲೆಕ್ಕಪತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಈ ವಿಷಯ ತಿಳಿದುಬಂದಿದೆ.
2010ರಲ್ಲಿ ಮ್ಯಾಗಿ ಜಾಹೀರಾತು, ಮಾರಾಟ ಪ್ರಚಾರಕ್ಕಾಗಿ ನೆಸ್ಲೆ ಕಂಪನಿ 302 ಕೋಟಿ ರೂ. ಖರ್ಚು ಮಾಡಿತ್ತು. 2014ರ ಹೊತ್ತಿಗೆ ಅದು ಶೇ.47ರಷ್ಟು ಏರಿಕೆ ಕಂಡು 445 ಕೋಟಿ ರೂ.ಗೆ ತಲುಪಿತು. ಇದೇ ವೇಳೆ, ಗುಣಮಟ್ಟ ಅಥವಾ ಪ್ರಯೋಗಾಲಯ ಪರೀಕ್ಷೆಗೆ 2010ರಲ್ಲಿ 13 ಕೋಟಿ ವ್ಯಯಿಸಿದ್ದ ನೆಸ್ಲೆ ಕಂಪನಿ 2014ರಲ್ಲಿ 19 ಕೋಟಿ ರೂ. ಖರ್ಚು ಮಾಡಿದೆ. ನೆಸ್ಲೆ ಒಂದೇ ಅಲ್ಲ, ಇತರೆ ಕಂಪನಿಗಳು ಕೂಡ ಗುಣಮಟ್ಟಕ್ಕಿಂತ ಜಾಹೀರಾತಿಗೇ ಹೆಚ್ಚು ದುಡ್ಡು ಸುರಿಯುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.