ನವದೆಹಲಿ : ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಆಹ್ವಾನ ನೀಡಿದೆ. ಅಲ್ಲದೆ, ಸಂಸತ್ತಿನ ಎಲ್ಲಾ ಸದಸ್ಯರಿಗೂ ಆಹ್ವಾನವನ್ನು ನೀಡಲಾಗಿದೆ.
ಅಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಈ ಕಾರ್ಯಕ್ರಮದಲ್ಲಿ ಬೆಳಗ್ಗೆ 7ರಿಂದ 7.30ರವರೆಗೆ ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ರಾಜಪಥದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಕ್ಕಳು, ಪೊಲೀಸರು ಮತ್ತು ಸೇನೆ ಸೇರಿದಂತೆ ಸುಮಾರು 1 ಲಕ್ಷ ಜನರು ಸೇರಲಿದ್ದಾರೆ ಎಂದು ಸಂಸ್ಕೃತಿ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಯೋಗದಿನವನ್ನು ಅವಿಸ್ಮರಣೀಯಗೊಳಿಸಲು ಉತ್ಸುಕರಾಗಿದ್ದು, ತಾವೇ ಸ್ವತಃ ಯೋಗ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಲಿದ್ದಾರೆ. ಅಲ್ಲದೆ, ಕಾರ್ಯಕ್ರಮದ ಮೇಲ್ವಿಚಾರಣೆಯನ್ನೂ ಮೋದಿ ಅವರೇ ನಿಭಾಯಿಸುತ್ತಿದ್ದು, ಕಳೆದವಾರ ಉನ್ನತ ಮಟ್ಟದ ಸಭೆ ಕರೆದು ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.
ವಿಶ್ವಸಂಸ್ಥೆ ಕಳೆದ ವರ್ಷ ಜೂ.21ನ್ನು ವಿಶ್ವ ಯೋಗದಿನ ಎಂದು ಘೋಷಿಸಿತ್ತು. ಈ ಸಂಬಂಧ ವಿಶ್ವಸಂಸ್ಥೆಯಲ್ಲಿ ಭಾರತ ಮಂಡಿಸಿದ ಗೊತ್ತುವಳಿಗೆ 177 ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು.
ನಟಿ ಶಿಲ್ಪಾ ಶೆಟ್ಟಿ, ಅಮಿತಾಭ್ ಬಚ್ಚನ್, ಅಕ್ಷಯ ಕುಮಾರ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಯೋಗ ದಿನದ ಬ್ರ್ಯಾಂಡ್ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ.