ಬೆಂಗಳೂರು : ರಾಜ್ಯದಲ್ಲಿ ನಡೆದಿರುವ ಬಹುಕೋಟಿ ಒಂದಂಕಿ ಲಾಟರಿ ಹಗರಣವನ್ನು ಕೊನೆಗೂ ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಒಂದಂಕಿ ಲಾಟರಿ ಹಗರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ, ಜೆಡಿಎಸ್ ಆಗ್ರಹಿಸಿತ್ತು.
ಒಂದಂಕಿ ಲಾಟರಿ ದಂಧೆ ಕುರಿತು ಕೇಂದ್ರದ ಜಾರಿ ನಿರ್ದೇಶನಾಲಯದಿಂದ(ಇ.ಡಿ.) ತನಿಖೆ ನಡೆಸಲಾಗುವುದು. ಪ್ರತಿಪಕ್ಷಗಳು ಒತ್ತಾಯಿಸಿದವು ಎಂಬ ಕಾರಣಕ್ಕೆ ಎಲ್ಲಾ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿಕೆ ನೀಡಿದ್ದರು.
ಸದ್ಯ ಒಂದಂಕಿ ಲಾಟರಿ ದಂಧೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ರಾಜಕಾರಣಿಗಳ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲಾಟರಿ ಹಗರಣ ಸಿಬಿಐಗೆ ಕೊಡುವಂತ ಪ್ರಕರಣ ಅಲ್ಲ. ಆದರೂ ಸಾರ್ವಜನಿಕರಿಗೆ ಸಂಶಯ ಬರಬಾರದು ಎಂಬ ಉದ್ದೇಶದಿಂದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿದೆ ಎಂದರು.
2007ರಿಂದ ರಾಜ್ಯದಲ್ಲಿ ಲಾಟರಿ ನಿಷೇಧಿಸಲಾಗಿದೆ. ಆದರೂ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ರಾಜ್ಯದಲ್ಲಿ ಲಾಟರಿ ದಂಧೆ ನಡೆಯುತ್ತಿದೆ. ಇದು ಹೊಸದೇನಲ್ಲ. ಲಾಟರಿ ದಂಧೆ ಬಗ್ಗೆ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸಿಲ್ಲ. ಸಿಐಡಿ ವರದಿ ಆಧರಿಸಿ ಐಜಿಪಿ ಮಟ್ಟದ ಅಧಿಕಾರಿಯನ್ನು ಅಮಾನತುಗೊಳಿಸಿದ್ದೇವೆ. ನಮ್ಮ ಸರ್ಕಾರ ಯಾರನ್ನು ರಕ್ಷಣೆ ಮಾಡಬೇಕಾದ ಅಗತ್ಯ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ ಎಂದರು.
ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ದೇವೇಗೌಡರು ನಾನು ಮತ್ತು ಗೃಹ ಸಚಿವರು ಭಾಗಿಯಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಒಬ್ಬ ಮಾಜಿ ಪ್ರಧಾನಿಯಾಗಿ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.