ನವದೆಹಲಿ : ಬಾಲ ಕಾರ್ಮಿಕ ಕಾನೂನು ತಿದ್ದುಪಡಿಗೆ ಕೇದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, 14 ವರ್ಷದ ಕೆಳಗಿನ ಮಕ್ಕಳು ಕೌಟುಂಬಿಕ ಉದ್ಯಮ ಅಥವಾ ಮನರಂಜನಾ ಉದ್ದಿಮೆಯಲ್ಲಿ ಅವಕಾಶ ನೀಡುವ ಹಾಗೂ ಇನ್ನೆಲೆಡೆ ಸಂಪೂರ್ಣ ನಿಷೇಧಿಸುವ ಕುರಿತು ನಿರ್ಧಾರ ಕೈಗೊಂಡಿದೆ.
ಈ ಹಿಂದೆ ಮೂಲ ಬಾಲ ಕಾರ್ಮಿಕ ಕಾನೂನು ಅಡಿಯಲ್ಲಿ ಅಪಾಯಕಾರಿ ಉದ್ದಿಮೆಗಳಲ್ಲಿ 14 ರಿಂದ 18 ವರ್ಷದ ಮಕ್ಕಳು ದುಡಿಯುವುದನ್ನು ನಿಷೇದಿಸಲಾಗಿತ್ತು.
ಈ ಹೊಸ ತಿದ್ದುಪಡಿಯಲ್ಲೂ 14 ರಿಂದ 18 ವರ್ಷದ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವುದನ್ನು ನಿಷೇದಿಸಿದೆ. ಈ ಕಾನೂನನ್ನು ಉಲ್ಲಂಘಿಸಿದವರಿಗೆ ಹೆಚ್ಚಿನ ಶಿಸ್ತಿನ ಕ್ರಮಗಳನ್ನು ಈ ಹೊಸ ಕಾನೂನು ಉಲ್ಲೇಖಿಸಿದೆ. ಮೊದಲ ಉಲ್ಲಂಘನೆಗೆ ಪೋಷಕರಿಗೆ ಯಾವುದೇ ಶಿಕ್ಷೆ ಇಲ್ಲದಿದ್ದರೂ, ಕೆಲಸದ ಒಡೆಯರಿಗೆ ಮೊದಲ ಉಲ್ಲಂಘನೆಗೆ ಶಿಕ್ಷೆ ಜಾರಿಯಾಗಲಿದೆ.
ಮರು ಉಲ್ಲಂಘನೆಗೆ ಮಾತ್ರ ಪೋಷಕರಿಗೆ 10,೦೦೦ ದಂಡ ಶಿಕ್ಷೆ ವಿಧಿಸಲಾಗುತ್ತದೆ.
ಮೊದಲ ಉಲ್ಲಂಘನೆಗೆ ಕೆಲಸದ ಒಡೆಯರಿಗೆ ದಂಡವನ್ನು 20 ಸಾವಿರದಿಂದ 50 ಸಾವಿರಕ್ಕೆ ಅಂದರೆ ಎರಡುವರೆ ಪಟ್ಟು ಹೆಚ್ಚಿಸಲಾಗಿದೆ.ಎರಡನೇ ಮತ್ತು ಮರು ಉಲ್ಲಂಘನೆಗಳಿಗೆ ಒಂದು ವರ್ಷದಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.
ಸರ್ಕಸ್ ಹೊರತುಪಡಿಸಿ ಜಾಹೀರಾತು, ಸಿನೆಮಾ, ಟಿವಿ, ರೇಡಿಯೋ ಇವುಗಳನ್ನು ಒಳಗೊಂಡಂತೆ ದೃಶ್ಯ ಶ್ರವಣ ಮನರಂಜನಾ ಮಾಧ್ಯಮ, ಹಾಗೂ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ. ಸಂಪುಟ ಸಭೆ ಈ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದು ಬಾಲ ಕಾರ್ಮಿಕ (ತಡೆ ಹಾಗು ನಿಯಂತ್ರಣ) ತಿದ್ದುಪಡಿ ಕಾಯ್ದೆ 2012 ರನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು.