ನವದೆಹಲಿ : ಅಮೇಥಿಯಲ್ಲಿ ಫುಡ್ ಪಾರ್ಕ್ ನಿರ್ಮಾಣ ಸಂಬಂಧ ಲೋಕಸಭೆಯಲ್ಲಿ ಗದ್ದಲ-ಕೋಲಾಹಲ ನಡೆದು ಕಲಾಪವನ್ನು ಕೆಲಕಾಲ ಮುಂದೂಡಿದ ಘಟನೆ ನಡೆದಿದೆ.
ಕೇಂದ್ರ ಸರ್ಕಾರ ಅಮೇಥಿ ಫುಡ್ ಪಾರ್ಕ್ ನ್ನು ಕಿತ್ತುಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಆರೋಪಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಆಹಾರ ಸಂಸ್ಕರಣಾ ಖಾತೆ ಸಚಿವೆ ಹರ್ ಸಿಮ್ರತ್ ಕೌರ್, ಅಮೇಥಿಯಲ್ಲಿ ಫುಡ್ ಪಾರ್ಕ್ ನಿರ್ಮಾಣ ಮಾಡಲು ಆದಿತ್ಯ ಬಿರ್ಲಾ ಗ್ರೂಪ್, 2010ರಲ್ಲಿ ಯುಪಿಎ ಸರ್ಕಾರದ ಅನುಮತಿ ಕೇಳಿತ್ತು. ಆದರೆ ಫುಡ್ ಪಾರ್ಕ್ ನಿರ್ಮಾಣಕ್ಕೆ ಸೂಕ್ತಜಾಗವಿಲ್ಲ. ಕನಿಷ್ಠ ಸೌಲಭ್ಯವೂ ಇಲ್ಲ ಎಂಬ ಕಾರಣ ನೀಡಿ ಯುಪಿಎ ಸರ್ಕಾರವೇ ನಿರಾಕರಿಸಿತ್ತು ಎಂದು ಕಿಡಿಕಾರಿದರು.
ಅಂದಿನ ಯುಪಿಎ ಸರ್ಕಾರವೇ ಫುಡ್ ಪಾರ್ಕ್ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಈಗ ರಾಹುಲ್ ಗಾಂಧಿಯೇ ಅಮೇಥಿಯಲ್ಲಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದಾರೆ ಎಂದರು. ಕೌರ್ ಹೇಳಿಕೆಗೆ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ನ್ಯಾಯ ದೊರಕಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಸರ್ಕಾರ ಹಕ್ಕು ಕಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೇಥಿ ಫುಡ್ ಪಾರ್ಕ್ಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯನ್ನು ಮಂಡಿಸಲು ಖರ್ಗೆ ಯತ್ನಿಸಿದರು. ಆದರೆ ಇದಕ್ಕೆ ಸಭಾಧ್ಯಕ್ಷರು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಖರ್ಗೆ, ಒಂದು ಯೋಜನೆ ಅಡಿಯಲ್ಲಿ ನಿಂದಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಖರ್ಗೆ ಹೇಳಿಕೆಗೆ ವಿಪಕ್ಷ ನಾಯಕರು ದನಿಗೂಡಿಸಿದಾಗ ಲೋಕಸಭೆಯಲ್ಲಿ ಗದ್ದಲ-ಕೋಲಾಹಲ ಉಂಟಾಯಿತು. ಇದರಿಂದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಕೆಲಕಾಲ ಮುಂದೂಡಿದರು.