ಹೈದರಾಬಾದ್ : ಐಸಿಸ್ ಉಗ್ರಗಾಮಿ ಸಂಘಟನೆ ಸೇರಿದ್ದ ಹೈದರಾಬಾದ್ ನ ಇಂಜಿನಿಯರಿಂಗ್ ವಿದ್ಯಾರ್ಥಿ, ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸಾವನ್ನಪ್ಪಿರುವುದಾಗಿ ಗುಪ್ತಚರ ಮೂಲಗಳು ಮಾಹಿತಿ ತಿಳಿಸಿವೆ.
ಸಾವನ್ನಪ್ಪಿರುವ ವಿದ್ಯಾರ್ಥಿ 25ವರ್ಷದ ಹನೀಫ್ ವಾಸೀಂ ಎಂದು ತಿಳಿದುಬಂದಿದೆ. 2014ರ ನವೆಂಬರ್ ನಲ್ಲಿ ಇಂಜಿನಿಯರಿಂಗ್ ಕಲಿಯಲು ಲಂಡನ್ ಗೆ ತೆರಳಿದ್ದ. ಬಳಿಕ ವಾಸೀಂ ಲಂಡನ್ ನಿಂದ ಸಿರಿಯಾಕ್ಕೆ ತೆರಳಿ ಐಸಿಸ್ ಸಂಘಟನೆ ಸೇರಿದ್ದ. ವಾಸೀಂ ಮಾರ್ಚ್ 15ರಂದು ಸಾವನ್ನಪ್ಪಿರುವುದಾಗಿ ಎನ್ ಡಿಟಿವಿ ವರದಿ ವಿವರಿಸಿದೆ.
ವಾಸೀಂ ಲಂಡನ್ ನಲ್ಲಿ ಇಂಜಿನಿಯರಿಂಗ್ ಮಾಸ್ಟರ್ ಡಿಗ್ರಿ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ವಾಸೀಂ ಐಸಿಸ್ ಉಗ್ರರ ಪ್ರಭಾವಕ್ಕೆ ಒಳಗಾಗಿದ್ದ. ಕಳೆದ ಫೆಬ್ರುವರಿ ತಿಂಗಳಿನಲ್ಲಿ ಈತ ತನ್ನ ಸಹೋದರಿ ಮದುವೆಗಾಗಿ ಹೈದರಾಬಾದ್ ನ ಆದಿಲಾಬಾದ್ ಜಿಲ್ಲೆಯ ಮಂಚೇರಿಯಲ್ ನಲ್ಲಿರುವ ಮನೆಗೆ ಭೇಟಿ ನೀಡಿದ್ದ ಎಂದು ವರದಿ ಹೇಳಿದೆ.
ವಾಸೀಂ ವಾಪಸ್ ತೆರಳುವಾಗ ಕರೀಂನಗರದಿಂದ ಮತ್ತೊಬ್ಬ ಯುವಕನನ್ನು ಕರೆದೊಯ್ದಿರುವುದಾಗಿ ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದೆ.