ಪಣಜಿ : ಗೋವಾ-ಕಾರವಾರ ನಡುವಿನ ಸಲ್ ಜೊರಾದ ಬಲ್ಲಿ ಎಂಬಲ್ಲಿ ಎರ್ನಾಕುಲಂ-ಡುರಾಂಟೊ ಎಕ್ಸ್ಪ್ರೆಸ್ ರೈಲಿನ ಹತ್ತು ಬೋಗಿಗಳು ಹಳಿ ತಪ್ಪಿವೆ. ಪರಿಣಾಮವಾಗಿ ಕಾರವಾರ ಮತ್ತು ಗೋವಾ ನಡುವಿನ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಸಂಜೆಯ ವೇಳೆಗೆ ಹಳಿ ಸಂಚಾರಕ್ಕೆ ಸಿದ್ದವಾಗಲಿದೆ ಎಂದು ಕೊಂಕಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಪ್ರಯಾಣಕ್ಕೆ ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಬದಲಿ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಪ್ರಯಾಣ ಮುಂದುವರಿಸಲು ಇಚ್ಚಿಸದವರಿಗೆ ಟಿಕೇಟ್ ಹಣ ಮರು ಪಾವತಿ ಮಾಡಲಾಗಿದೆ.
ಹಳಿ ತಪ್ಪಿರುವ ರೈಲು ಬೋಗಿಗಳನ್ನು ರೈಲ್ವೇ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.