ನವದೆಹಲಿ : ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಮತ್ತೊಂದು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಕೈಗಾ ಸೇರಿದಂತೆ ದೇಶದ 9 ರಾಜ್ಯಗಳ 10 ಸ್ಥಳಗಳಲ್ಲಿ ಸ್ವದೇಶಿ ತಂತ್ರಜ್ಞಾನ ಬಳಸಿ, ವಿದೇಶಿ ನೆರವಿನೊಂದಿಗೆ ಅಣು ಸ್ಥಾವರ ನಿರ್ಮಿಸಲು ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ ಎಂದು ಪ್ರಧಾನಿ ಕಾರ್ಯಾಲಯ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ತಿಳಿಸಿದ್ದಾರೆ.
ಹರ್ಯಾಣದ ಫತೇಹಾಬಾದ್ ನಲ್ಲಿರುವ ಗೋರಖ್ ಪುರ ಗ್ರಾಮ, ಮಧ್ಯಪ್ರದೇಶದ ಚುಟ್ಕಾ ಹಾಗೂ ಭೀಮ್ ಪುರ, ರಾಜಸ್ಥಾನದ ಮಾಹಿ ಬನ್ ಸ್ವಾರಾದಲ್ಲೂ ಸ್ಥಾವರಗಳನ್ನು ನಿರ್ಮಿಸಲು ಉದ್ದೇಶಿ ಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯ ಸರ್ಕಾರಗಳು ಅಣು ಸ್ಥಾವರ ಸ್ಥಾಪಿಸಲು ನಿರಾಸಕ್ತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ, ತಾನು ಇನ್ನೊಂದು ಘಟಕ ಸ್ಥಾಪಿಸಲು ಆಸಕ್ತಿ ಹೊಂದಿರುವುದಾಗಿ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಸದ್ಯ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ತೀರದಲ್ಲಿರುವ ಕೈಗಾದಲ್ಲಿ ತಲಾ 220 ಮೆಗಾವ್ಯಾಟ್ ಸಾಮರ್ಥ್ಯದ 4 ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ.