ನವದೆಹಲಿ : ನೇಪಾಳ ಹಾಗೂ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಭೂಕಂಪ ಸಂಭವಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ತುರ್ತು ಸಭೆ ನಡೆಯಲಿದ್ದು, ಭೂಕಂಪದ ಹಾನಿ ಹಾಗೂ ತ್ವರಿತಗತಿ ಕಾರ್ಯಾಚರಣೆ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಪ್ರಧಾನಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಭಯಭೀತರಾಗಬಾರದು. ಸರ್ಕಾರ ಎಂಥದ್ದೇ ಸಂದರ್ಭವನ್ನು ನಿಭಾಯಿಸಲು ಸನ್ನದ್ಧವಾಗಿದೆ ಎಂದು ಅಭಯ ನೀಡಿದ್ದಾರೆ.
ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್, ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ವಸುಂಧರಾ ರಾಜೇ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜಾರ್ಖಂಡ್, ಪಂಜಾಬ್ ಸೇರಿದಂತೆ ಎಲ್ಲ ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು.
ಇನ್ನೊಂದೆಡೆ ಭೂಕಂಪ ಉಂಟಾಗಿರುವುದರಿಂದ ಭೂ ಸೇನೆ, ವಾಯು ಸೇನೆ ಮತ್ತು ನೌಕಾದಳವನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಇದರ ಜತೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ತಂಡ ಕೂಡ ಈಗಾಗಲೇ ಕೆಲವು ಸ್ಥಳಗಳಿಗೆ ರವಾನೆ ಮಾಡಲಾಗಿದೆ.
ಮತ್ತೊಂದೆಡೆ ನೇಪಾಳದ ಅಧ್ಯಕ್ಷ ಡಾ.ರಾಮ್ ಬರಾಳ್ ಯಾದವ್ ಹಾಗೂ ಪ್ರಧಾನಮಂತ್ರಿ ಸುಶೀಲ್ ಕೊಯಿರಾಲಾ ಜತೆಯೂ ಮೋದಿ ಮಾಹಿತಿ ಪಡೆದಿದ್ದಾರೆ. ನೆರೆಯ ರಾಷ್ಟ್ರಕ್ಕೆ ಎಲ್ಲ ರೀತಿಯ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ.