ನವದೆಹಲಿ : ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಾಗೂ ಮಧ್ಯಭಾರತದಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಿದ್ದು, ಬಿಸಿ ಗಾಳಿ ಬೀಸಲಾರಂಭಿಸಿದೆ. ವಿವಿಧ ರಾಜ್ಯಗಳಲ್ಲಿ 50 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ.
ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ, ನವದೆಹಲಿ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ತಾಪಮಾನ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಾತಾವರಣ ಕಾದ ಕೆಂಡದಂತಾಗಿದೆ. ಸೆಕೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ.
ಮಧ್ಯಪ್ರದೇಶದಲ್ಲಿ 45.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ಐದು ವರ್ಷಗಳಲ್ಲಿ ಇದು ಅತ್ಯಧಿಕ ತಾಪಮಾನ ಎಂದು ಹೇಳಲಾಗಿದೆ. ಗುಜರಾತ್ನ ಅಹಮದಾಬಾದ್ ನಗರದಲ್ಲಿ ಉಷ್ಣತೆ ವ್ಯಾಪಕವಾಗಿ ಏರಿದ್ದು 48 ಡಿಗ್ರಿ ದಾಖಲಾಗಿದೆ. ಇದು 100 ವರ್ಷಗಳಲ್ಲೇ ಅಪೂರ್ವ ದಾಖಲೆಯಾಗಿದೆ. ಹರಿಯಾಣದ ಹಿಸಾರ್ನಲ್ಲಿ ಅತ್ಯಧಿಕ ಎಂದರೆ 46 ಡಿಗ್ರಿ ಸೆಲ್ಸಿಯಸ್, ಕರ್ನಲ್ನಲ್ಲಿ 43.8, ಅಂಬಾಲಾ ಮತ್ತು ಚಂಡಿಗಢ ದಲ್ಲಿ 43 ಡಿ.ಸೆ. ತಾಪಮಾನವಿದೆ. ರಾಜಧಾನಿ ದೆಹಲಿ 43 ಡಿಗ್ರಿ ಉಷ್ಣಾಂಶ ದಾಖಲಿಸಿದೆ.
ಅಮೃತಸರದಲ್ಲಿ 45, ಲೂಧಿಯಾನಾದಲ್ಲಿ 44, ಪಟಿಯಾಲಾದಲ್ಲಿ 44.4. ಡಿ.ಸೆ. ತಾಪಮಾನ ದಾಖಲಾಗಿದ್ದು, ಇಲ್ಲಿ ಇದು ವರ್ಷದ ಅತ್ಯಧಿಕ ಉಷ್ಣಾಂಶ ಎನ್ನಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಇದೇ ರೀತಿ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.