ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದ ನರ್ಬಾಲ್ ಎಂಬ ಪ್ರದೇಶದಲ್ಲಿ ಪೊಲೀಸರು ಗುಂಡು ಹಾರಿಸಿರುವ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕಳೆದ ವಾರ ಪುಲ್ವಾಮ ಜಿಲ್ಲೆಯ ಟ್ರಾಲ್ ನಲ್ಲಿ ಸೇನಾ ಪಡೆ ಗುಂಡಿಗೆ ಇಬ್ಬರು ಯುವಕರು ಬಲಿಯಾದ ಹಿನ್ನೆಲೆಯಲ್ಲಿ ಕೆಲ ಯುವಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ, ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ ಜಮ್ಮು-ಕಾಶ್ಮೀರ ಪೊಲೀಸರು, ಗುಂಡು ಹಾರಿಸಿದರು, ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ಯುವಕರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಪೈಕಿ ಓರ್ವನನ್ನು ಸುಹೇಲ್ ಅಹಮದ್ ಸೋಫಿ ಎಂದು ಗುರುತಿಸಲಾಗಿದೆ. ಇನ್ನು ಕಾಶ್ಮೀರ ಪ್ರತ್ಯೇಕತಾವಾದಿಗಳ ಬಂಧನವನ್ನು ವಿರೋಧಿಸಿ ಜಮ್ಮು-ಕಾಶ್ಮೀರ ಬಂದ್ ಗೆ ಕರೆ ನೀಡಲಾಗಿದೆ. ಹುರಿಯತ್ ನಾಯಕ ಗಿಲಾನಿ ಈಗಾಗಲೇ ಗೃಹಬಂಧನದಲ್ಲಿದ್ದು, ಮಸರತ್ ಆಲಂ ನನ್ನು ಬಂಧಿಸಿರುವುದನ್ನು ಖಂಡಿಸಿ ಕಾಶ್ಮೀರ ಬಂದ್ ಗೆ ಕರೆ ನೀಡಿದ್ದಾರೆ.
ಗಿಲಾನಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಭಾಗವಹಿಸಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಮಸರತ್ ಆಲಂ ನನ್ನು 7 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ಕಳಿಸಲಾಗಿದೆ.