ಜಮ್ಮು-ಕಾಶ್ಮೀರ : 'ಕಾಶ್ಮೀರ'ದಲ್ಲಿ ದೇಶವಿರೋಧಿ ರ್ಯಾಲಿ ನಡೆಸಿ ಬಂಧನಕ್ಕೊಳಗಾಗುತ್ತಿದ್ದರೂ ಪ್ರತ್ಯೇಕತಾವಾದಿಗಳ ಸೊಕ್ಕು ಕಡಿಮೆಯಾಗಿಲ್ಲ.
ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜಾರೋಹಣ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ, ಕಾಶ್ಮೀರದಲ್ಲಿ ಮತ್ತೊಮ್ಮೆ ಪಾಕಿಸ್ತಾನ ಧ್ವಜಾರೋಣ ಮಾಡುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನ ಧ್ವಜಾರೋಹಣ ಮಾಡಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಆಸಿಯಾ, ಅವಕಾಶ ಸಿಕ್ಕಾಗಲೆಲ್ಲಾ ಪಾಕಿಸ್ತಾನದ ಧ್ವಜಾರೋಹಣ ಮಾಡುವುದಾಗಿ ಎಚ್ಚರಿಸಿದ್ದಾರೆ.
ಜೀನ್ಯೂಸ್ ಗೆ ಹೇಳಿಕೆ ನೀಡಿದ್ದು, ಕಾಶ್ಮೀರ ಭಾರತದ ಪ್ರದೇಶವಲ್ಲ ಎಂಬುದನ್ನು ಸಾಬೀತುಪಡಿಸಲು ಪಾಕಿಸ್ತಾನ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ. ದುಖ್ತರನ್-ಎ-ಮಿಲ್ಲತ್ ಎಂಬ ಪ್ರತ್ಯೇಕತಾವಾದಿ ಉಗ್ರ ಸಂಘಟನೆಯ ನೇತೃತ್ವ ವಹಿಸಿರುವ ಆಸಿಯಾ ಅಂದ್ರಾಬಿ, ಮಾ.23ರಂದು ನಡೆದ ಪಾಕಿಸ್ತಾನ ದಿನಾಚರಣೆ ಸಂದರ್ಭದಲ್ಲಿ ನವದೆಹಲಿಯಲ್ಲಿ ಆಸಿಯಾ ಅಂದ್ರಾಬಿ ಪಾಕಿಸ್ತಾನ ಧ್ವಜಾರೋಹಣೆ ಮಾಡಿದ್ದರು. ಅಲ್ಲದೇ ಪಾಕ್ ನ ರಾಷ್ಟ್ರಗೀತೆನ್ನೂ ಕಾರ್ಯಕ್ರಮದಲ್ಲಿ ಹಾಡಿದ್ದರು.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆಯ ಸೆಕ್ಷನ್ 13ರಡಿಯಲ್ಲಿ ಆಸಿಯಾ ವಿರುದ್ಧ ಜಮ್ಮು-ಕಾಶ್ಮೀರದ ನೌಹಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದರು.