ಬೆಂಗಳೂರು : 'ಕೆಪಿಸಿಸಿ' ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ ರಾಜಶೇಖರನ್ ಒತ್ತಾಯಿಸಿದ್ದಾರೆ.
ಏ.14ರಂದು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ರಾಜಶೇಖರನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬ ಅತ್ಯುತ್ತಮ ಆಡಳಿತಗಾರ, ಸಂಸದೀಯ ಪಟು. ಆದರೆ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದರೆ ರಾಷ್ಟ್ರದ ಭವಿಷ್ಯ ಮಂಕಾಗುತ್ತದೆ. ಆದ್ದರಿಂದ ಸಿ.ಎಂ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ದಲಿತರಿಗೆ ಅಧಿಕಾರ ನೀಡುವ ದೀಕ್ಷೆ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಕೇವಲ ಜ್ನಾನಿ ಅಲ್ಲ, ಅವರೊಬ್ಬ ವಿಜ್ನಾನಿ, ಅವರು ಆದಷ್ಟು ಬೇಗ ಉಪಮುಖ್ಯಮಂತ್ರಿಯಾಗಬೇಕು, ಈ ಬಗ್ಗೆ ಕಾಂಗ್ರೆಸ್ ನಾಯಕರು ಗಮನ ಹರಿಸಬೇಕೆಂದು ರಾಜಶೇಖರನ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ಕಾಂಗ್ರೆಸ್ ನ ಹಿರಿಯ ಮುಖಂಡರೊಬ್ಬರು ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಕೂಗಿಗೆ ದನಿಗೂಡಿಸಿದ್ದಾರೆ.