ಡಮಾಸ್ಕಸ್ : ಮಹಿಳೆಯರನ್ನೇ ಒಳಗೊಂಡ ಜಿಹಾದಿ ದಳವೊಂದು ಇದೀಗ ಸಿರಿಯಾದಲ್ಲಿ ಕಾಣಿಸಿಕೊಂಡಿದೆ. ಈ ಮಹಿಳಾ ಜಿಹಾದಿ ದಳದವರು ಕೈಯಲ್ಲಿ ಕಲಾಶ್ನಿಕೋವ್ ಬಂದೂಕನ್ನು ಝಳಪಿಸುತ್ತಾ "ಅಲ್ಲಾಹು ಅಕ್ಬರ್' ಎಂದು ದೊಡ್ಡ ಧ್ವನಿಯಲ್ಲಿ ಉದ್ಗರಿಸುವುದನ್ನು ಕಾಣಿಸುವ ವಿಡಿಯೋ ಚಿತ್ರಿಣಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಐದು ನಿಮಿಷಗಳ ಈ ವಿಡಿಯೋದಲ್ಲಿ ಉತ್ತರ ಸಿರಿಯಾದ ಸೈಂಟ್ ಸೈಮನ್ ಚರ್ಚಿನ ಮಂಭಾಗದಲ್ಲಿ ಈ ಮಹಿಳಾ ಜಿಹಾದಿ ತಂಡ ಎಕೆ 47 ಕಲಾಶ್ನಿಕೋವ್ ಬಂದೂಕನ್ನು ಬಳಸುವ ತರಬೇತಿಯನ್ನು ಪಡೆಯುತ್ತಿರುವುದು ಕಂಡು ಬರುತ್ತದೆ. ಮಾತ್ರವಲ್ಲದೆ ಅತ್ಯಂತ ಕಟ್ಟುನಿಟ್ಟಿನ ಕವಾಯತು ನಡೆಸುತ್ತಿರುವುದು ಕೂಡ ಕಂಡು ಬರುತ್ತದೆ.
ವಿಡಿಯೋದ ಮೊದಲ ಭಾಗದಲ್ಲಿ ಸುಮಾರು 45 ಮಂದಿ ಮಹಿಳಾ ಜಿಹಾದಿಗಳು ಐಸಿಸ್ ಉಗ್ರರ ರೀತಿಯಲ್ಲಿ ಸಂಪೂರ್ಣವಾಗಿ ಕಪ್ಪು ಬಟ್ಟೆ ತೊಟ್ಟಿರುವುದು ಕಂಡು ಬರುತ್ತಿದೆ. ತಮ್ಮ ಮುಂದೆ ಇರಿಸಲಾಗಿರುವ ಗುರಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಎಕೆ 47 ಮೂಲಕ ನಿಖರವಾಗಿ ಗುಂಡು ಹೊಡೆಯುವ ತರಬೇತಿಯನ್ನು ಪಡೆಯುವಲ್ಲಿ ಈ ಮಹಿಳೆಯರು ನಿರತರಾಗಿದ್ದು ಅಲ್ಲಾಹು ಅಕ್ಬರ್ ಎಂದು ಏರಿದ ಧ್ವನಿಯಲ್ಲಿ ಬೊಬ್ಬಿಡುವುದು ಕಾಣುತ್ತದೆ.
ಎರಡನೇ ಭಾಗದ ವಿಡಿಯೋದಲ್ಲಿ ಓರ್ವ ಮಹಿಳೆ, ತಾವು ಪುರುಷ ಉಗ್ರರಿಗೆ ಯಾವ ರೀತಿಯಲ್ಲೂ ಕಡಿಮೆಯವರಲ್ಲ; ನಮ್ಮದು ಸಮಾನತೆಯನ್ನು ಸಾರುವ ದಳ; ನಾವು ಪುರುಷ ಉಗ್ರರಿಗೆ ಅಡಿಯಾಳಲ್ಲ ಎಂದು ಅರೆಬಿಕ್ ಭಾಷೆಯಲ್ಲಿ ಹೇಳುವುದು ಕೇಳಿಬರುತ್ತದೆ.
ನಾವು ಅಲ್ ಶಾಮ್ ನಿಂದ ಬಂದ 45 ಮಹಿಳಾ ಜಿಹಾದಿಗಳು. ನಾವು ನಮ್ಮ ಮಾತೃ ಭೂಮಿಯನ್ನು ರಕ್ಷಿಸುವ ಹೋರಾಟಕ್ಕೆ ಇಳಿದಿದ್ದೇವೆ. ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುವುದು, ತಯಾರಿಸುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಬಳಸುವುದು ನಮಗೆ ಗೊತ್ತಿದೆ. ನಾವು ಆ ಕಲೆಯಲ್ಲಿ ತರಬೇತಿ, ಪರಿಣತಿ ಪಡೆದಿದ್ದೇವೆ. ಮಾತ್ರವಲ್ಲದೆ ನಾವು ಶರಿಯಾ ಮತ್ತು ಧಾರ್ಮಿಕ ಗ್ರಂಥಗಳನ್ನು ಕೂಡ ಅಧ್ಯಯನ ಮಾಡಿದ್ದೇವೆ' ಎಂದು ಹೇಳುತ್ತಾಳೆ.
ವಿಚಿತ್ರವೆಂದರೆ ತಮ್ಮ ಮಹಿಳಾ ಜಿಹಾದಿ ದಳವು ಐಸಿಸ್ ಗೆ ಬೆಂಬಲ ನೀಡುವ ಉದ್ದೇಶದಿಂದ ರಚಿತವಾಗಿಲ್ಲ ಎಂದು ಆ ಮಹಿಳಾ ಜಿಹಾದಿ ಹೇಳುತ್ತಾಳೆ. "ನಾವು ಪುರುಷರಷ್ಟೇ ಮುಖ್ಯವಾದ ಪಾತ್ರವನ್ನು ವಹಿಸುವಷ್ಟು ಸಮರ್ಥರಿದ್ದೇವೆ. ನಾವು ಯಾವ ದೃಷ್ಟಿಯಲ್ಲೂ ಪುರುಷ ಜಿಹಾದಿಗಳಿಗಿಂತ ಕಡಿಮೆಯವರಲ್ಲ' ಎಂದು ಈ ಜಿಹಾದಿ ಮಹಿಳೆ ಹೇಳುತ್ತಾಳೆ.