ಪ್ಯಾರೀಸ್ : ಸಂಸ್ಕೃತಿ ಎನ್ನುವುದು ಜಗತ್ತನ್ನು ಒಗ್ಗೂಡಿಸಬೇಕೆ ಹೊರತು, ವಿಭಜಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್ ಪ್ರವಾಸದಲ್ಲಿರುವ ಮೋದಿ, ಏ.10ರಂದು ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಮಾತನಾಡಿ, ಜಗತ್ತನ್ನು ವಿಶ್ವಸಂಸ್ಥೆ ಒಂದಾಗಿಸಿದೆ. ವಿಶ್ವಸಂಸ್ಥೆಯ ಮಹತ್ವವನ್ನು ಭಾರತ ಅರಿತಿದ್ದು ಅದರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಲಿದೆ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಶಾಂತಿ ನೆಲೆಸಬೇಕಿದೆ. ಇದಕ್ಕಾಗಿ ಎಲ್ಲರಿಗೂ ಶಿಕ್ಷಣ ನೀಡಬೇಕಿದೆ. ವಿದ್ಯೆ ಎಲ್ಲಕ್ಕಿಂತಲೂ ದೊಡ್ಡ ಸಂಪತ್ತು, ಭಾರತೀಯ ಸಂಸ್ಕೃತಿಯಲ್ಲಿ ವಿದ್ಯೆಗೆ ಮಹತ್ವದ ಸ್ಥಾನವಿದೆ ಎಂದು ಮೋದಿ ತಿಳಿಸಿದ್ದಾರೆ. ಎಲ್ಲಾ ಧರ್ಮದ ಎಲ್ಲಾ ಪ್ರಜೆಗಳಿಗೂ, ಶಿಕ್ಷಣ ನೀಡಲಿದ್ದೇವೆ ಎಂದು ನರೇಂದ್ರ ಮೋದಿ ಇದೇ ವೇಳೆ ಭರವಸೆ ನೀಡಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಶೈಕ್ಷಣಿಕ ವಿಷಯದಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಜಗತ್ತಿಗೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಬಣ್ಣಿಸಿದ್ದಾರೆ. ವಿಶ್ವಸಂಸ್ಥೆಯ ರೀತಿ ಬೇರೆ ಯಾವುದೇ ಸಂಸ್ಥೆಗಳು ಸೇವೆ ಸಲ್ಲಿಸಲು ಸಾಧ್ಯವಿಲ್ಲ, ಇಲ್ಲಿಗೆ ಬಂದು ಮಾತನಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮೋದಿ ತಿಳಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು 10 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.