ನವದೆಹಲಿ : 'ಆಮ್ ಆದ್ಮಿ ಪಕ್ಷ'ದಲ್ಲಿ ಉಂಟಾಗಿರುವ ಆಂತರಿಕ ಭಿನ್ನಮತದಿಂದ ಬೇಸತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕ್ರಿಸ್ಟಿನಾ ಸ್ಯಾಮಿ ರಾಜೀನಾಮೆ ನೀಡಿದ್ದಾರೆ.
ಕ್ರಿಸ್ಟಿನಾ ಸ್ಯಾಮಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಉಳಿದಿದ್ದ ಏಕೈಕ ಮಹಿಳಾ ಸದಸ್ಯೆಯಾಗಿದ್ದರು. ಕ್ರಿಸ್ಟಿನಾ ಸ್ಯಾಮಿ, ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿರುವುದರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಪಕ್ಷದಲ್ಲಿ ಪ್ರಾರಂಭದ ಹಂತದಿಂದಲೂ ಇದ್ದ 21 ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಪೈಕಿ ಕ್ರಿಸ್ಟಿನಾ ಸ್ಯಾಮಿ ಕೂಡಾ ಒಬ್ಬರಾಗಿದ್ದರು. ಆಪ್ ನಲ್ಲಿ ಉಂಟಾಗಿರುವ ಭಿನ್ನಮತದಿಂದ ಬೇಸತ್ತು ಸ್ಯಾಮಿ ಅವರೂ ಸೇರಿ ಈ ವರೆಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಸ್ಥಾನಕ್ಕೆ 5ಜನರು ರಾಜೀನಾಮೆ ನೀಡಿದ್ದಾರೆ.
ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಉಚ್ಛಾಟಿಸಿದರ ಪರವಾಗಿ 247ಸದಸ್ಯರು ಮತ ಚಲಾಯಿಸಿದ್ದರು. ಕೇವಲ 8 ಜನರು ಮಾತ್ರ ಇಬ್ಬರನ್ನು ಉಚ್ಛಾಟಿಸಿರುವುದರ ವಿರುದ್ಧ ಮತ ಚಲಾಯಿಸಿದ್ದರು. ಈ ಪೈಕಿ ಕ್ರಿಸ್ಟಿನಾ ಸ್ಯಾಮಿ ಕೂಡಾ ಒಬ್ಬರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಆಪ್ ಪಕ್ಷ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಉಚ್ಛಾಟಿಸಿತ್ತು.