BW News Bureau : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಏ.2ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಐದು ದಿನ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಪ್ರಧಾನಿ ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ವಿಶೇಷ ಭದ್ರತೆಗಾಗಿ ಸುಮಾರು 1,500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ.
ನಗರದ ಅಶೋಕ ಹೋಟೆಲ್ನಲ್ಲಿ ಏಪ್ರಿಲ್ 2ರಿಂದ 4ವರೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಿಗದಿಯಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿರಿಯ ನೇತಾರ ಎಲ್.ಕೆ.ಆಡ್ವಾಣಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ನಿತಿನ್ ಗಡ್ಕರಿ ಸೇರಿದಂತೆ ಹಲವು ಗಣ್ಯರ ದಂಡು ಪಾಲ್ಗೊಳ್ಳಲಿದೆ. ಇದರ ಜತೆಗೆ ದೆಹಲಿ ಸೇರಿದಂತೆ ದೇಶದ ವಿವಿಧೆಡೆಯಿಂದ ಪಕ್ಷದ ಸುಮಾರು 300ಕ್ಕೂ ಅಧಿಕ ಹಿರಿಯ ಮುಖಂಡರು ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಭೆ ನಡೆಯುವ ಪ್ರದೇಶವಲ್ಲದೆ ನಗರ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರು ಅಶೋಕ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏ.3ರಂದು ಬಹಿರಂಗ ಸಭೆ ಕೂಡ ನಿಗದಿಯಾಗಿದೆ. ಹಾಗಾಗಿ ಭದ್ರತೆಗೆ 1,500 ಪೊಲೀಸರು, ಕ್ಷಿಪ್ರ ಕಾರ್ಯಪಡೆಯ 2 ತುಕಡಿಗಳು, 40 ಕೆಎಸ್ಆರ್ಪಿ ಹಾಗೂ ಕರ್ನಾಟಕ ಕೈಗಾರಿಕಾ ಪಡೆಯ 500 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಪ್ರಧಾನ ಮಂತ್ರಿಗಳ ಸಭೆಯ ಭದ್ರತೆ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆ ಸಭೆಯನ್ನೂ ನಡೆಸಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.