ಕೊಲಂಬೋ : 'ಶ್ರೀಲಂಕಾ' ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ನಾಗರಿಕರಿಗೆ ವಿಮಾನ ನಿಲ್ದಾಣದಲ್ಲೇ ವೀಸಾ ಕೊಡುವ ವೀಸಾ ಆನ್ ಅರೈವಲ್ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಏ.14ರಿಂದ ಈ ಸೇವೆ ಜಾರಿಗೊಳ್ಳಲಿದೆ. ಅತಿ ಗಂಭೀರವಾಗಿರುವ ಮೀನುಗಾರರ ಸಮಸ್ಯೆ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ-ಶ್ರೀಲಂಕಾ ನಡುವೆ ಇರುವ ಮೀನುಗಾರರ ವಿಷಯ ಜೀವನೋಪಾಯ ಮತ್ತು ಮಾನವೀಯ ಕಾಳಜಿಯನ್ನು ಒಳಗೊಂಡಿದೆ. ಇದಕ್ಕಾಗಿ ದೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಮೀನುಗಾರರ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ತಾವು ಶ್ರೀಲಂಕಾ ಪ್ರವಾಸ ಕೈಗೊಂಡಿರುವುದು ಸಂತಸ ಉಂಟುಮಾಡಿದೆ ಎಂದು ಮೋದಿ ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುವಜನ ಅಭಿವೃದ್ಧಿ, ರವೀಂದ್ರನಾಥ್ ಠಾಗೂರ್ ವಸ್ತುಸಂಗ್ರಹಾಲಯ, ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯಿತಿ ಸೇರಿದಂತೆ ಹಲವು ಒಪ್ಪಂದಗಳಿಗೆ ಉಭಯ ನಾಯಕರೂ ಸಹಿ ಹಾಕಿದ್ದಾರೆ.