ಹರಿಯಾಣ : 'ಮಹಾರಾಷ್ಟ್ರ'ದಲ್ಲಿ ಗೋಹತ್ಯೆ ನಿಷೇಧಿಸಿದ ಬೆನ್ನಲ್ಲೇ ಹರಿಯಾಣದಲ್ಲೂ ಅದೇ ಮಾದರಿಯಲ್ಲಿ ಕಾನೂನು ಜಾರಿಯಾಗಲಿದೆ.
ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ ಗೋಹತ್ಯೆ ಹಾಗೂ ಗೋಮಾಂಸ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹರ್ಯಾಣ ಸರ್ಕಾರ ಸಿದ್ಧತೆ ನಡೆಸಿದೆ.
ಹರಿಯಾಣ ಸರ್ಕಾರ ಮಸೂದೆಯನ್ನು ಜಾರಿಗೆ ತಂದದ್ದೇ ಆದಲ್ಲಿ ಗೋಮಾಂಸ ಮಾರಾಟ ಹಾಗೂ ದಾಸ್ತಾನು ಮಾಡುವುದುನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ಯಾಣ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ, ಗೋಹತ್ಯೆಯನ್ನು ತಡೆಯುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು, ದೇಶದಲ್ಲಿರುವ ಗೋವುಗಳನ್ನು ರಕ್ಷಿಸಬೇಕಿದೆ, ಗೋ ರಕ್ಷಣೆಗಾಗಿ ಕಾನೂನು ಜಾರಿ ಮಾಡಬೇಕಿದೆ ಎಂದು ಹೇಳಿದ್ದಾರೆ.
ಗೋವಿಗೆ ಪೂಜನೀಯ ಸ್ಥಾನ ನೀಡುವ ಭಾರತವೇ ಗೋಮಾಂಸ ರಫ್ತು ಮಾಡುವುದರಲ್ಲಿ ಅಗ್ರಗಣ್ಯ ರಾಷ್ಟ್ರವಾಗಿರುವುದಕ್ಕೆ ಪ್ರಧಾನಿ ಮೋದಿ ಅವರಲ್ಲಿ ನೋವಿದೆ. ಹರ್ಯಾಣ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳಲ್ಲಿ ಗೋಹತ್ಯಾ ನಿಷೇಧವೂ ಒಂದಾಗಿದೆ. ಆದ್ದರಿಂದ ಹರ್ಯಾಣ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಿದೆ ಎಂದು ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.